Saturday, September 27, 2025

ಕದನ ವಿರಾಮಕ್ಕೆ ಟ್ರಂಪ್ ಕಾರಣ, ‘ನೊಬೆಲ್’ ಶಾಂತಿ ಸಿಗಲಿ: ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಷರೀಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ವೇಳೆ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರಣರಾಗಿದ್ದು, ಅವರಿಗೆ ‘ನೊಬೆಲ್’ ಶಾಂತಿ ಪಾರಿತೋಷಕ ನೀಡಬೇಕು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಷರೀಫ್, ಟ್ರಂಪ್ ಮಧ್ಯ ಪ್ರವೇಶದಿಂದಾಗಿಯೇ ಯುದ್ದ ಉಲ್ಬಣವಾಗಲಿಲ್ಲ. ಅವರು ಮಧ್ಯಪ್ರವೇಶಿಸದಿದ್ದರೆ, ಅದು ಘೋರ ಯುದ್ಧವಾಗಿರುತ್ತಿತ್ತು. ಟ್ರಂಪ್ ಶಾಂತಿಪ್ರಿಯ ವ್ಯಕ್ತಿ. ನಾವು ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬೇಕು. ಇದು ನಾವು ಅವರಿಗೆ ನೀಡುವ ಕನಿಷ್ಠ ಗೌರವ ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತದ ವಿರುದ್ಧ ಕಿಡಿಕಾರಿದ ಶೆಹಬಾಜ್ ಷರೀಫ್, ‘ಸಿಂದೂ ನದಿ ನೀರು ಒಪ್ಪಂದದ ಯಾವುದೇ ಉಲ್ಲಂಘನೆಯು ಯುದ್ಧದ ಕೃತ್ಯವಾಗುತ್ತದೆ. ಪಾಕಿಸ್ತಾನದ ವಿದೇಶಾಂಗ ನೀತಿಯು ಶಾಂತಿ, ಪರಸ್ಪರ ಗೌರವ ಮತ್ತು ಸಹಕಾರವನ್ನು ಆಧರಿಸಿದೆ ಮತ್ತು ವಿವಾದಗಳನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಎಂದು ಹೇಳಿದರು.

ಮೇ ತಿಂಗಳಲ್ಲಿ ನಮ್ಮ ದೇಶವು ಪೂರ್ವ ಭಾಗದಿಂದ ಅಪ್ರಚೋದಿತ ಆಕ್ರಮಣವನ್ನು ಎದುರಿಸಿತು. ನಮ್ಮ ಪ್ರತಿಕ್ರಿಯೆ ಆತ್ಮರಕ್ಷಣೆಗೆ ಅನುಗುಣವಾಗಿತ್ತು. ಆದಾಗ್ಯೂ ನಾವು ಅವರನ್ನುಶೌರ್ಯದಿಂದ ಹಿಮ್ಮೆಟಿಸಿದೆವು. ಭಾರತ ನಮ್ಮ ನಗರಗಳ ಮೇಲೆ ದಾಳಿ ಮಾಡಿ ನಮ್ಮ ನಾಗರಿಕರನ್ನು ಗುರಿಯಾಗಿಸಿಕೊಂಡಿತು ಎಂದು ಹೇಳಿದರು.

ನಮ್ಮ ನಗರಗಳ ಮೇಲೆ ದಾಳಿ ಮಾಡಲು ಬಂದ ಭಾರತದ 7 ಯುದ್ಧವಿಮಾನಗಳನ್ನು ಹೊಡೆದುರುಳಿಸಿದೆವು. ನಮ್ಮ ಸೇನೆ ಮತ್ತು ಅಂದಿನ ಸೇನಾಧ್ಯಕ್ಷ ಆಸಿಫ್ ಮುನೀರ್ ಅವರ ಈ ಸಾಹಸ ಶ್ಲಾಘನೀಯ ಎಂದು ಹೇಳಿದರು.

ಪರಮಾಣು ಯುದ್ಧ
ಪರಮಾಣು ದೇಶಗಳಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಮೇ ತಿಂಗಳ ಯುದ್ಧ ಉಲ್ಬಣವಾಗಿದ್ದರೆ ಯಾರೂ ಬದುಕಿರುತ್ತಿರಲಿಲ್ಲ ಎಂದು ಹೇಳುವ ಮೂಲಕ ಎರಡೂ ದೇಶಗಳ ನಡುವೆ ಪರಮಾಣು ಯುದ್ಧದ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.