Wednesday, January 14, 2026
Wednesday, January 14, 2026
spot_img

ಭಾರತೀಯ ಚಹಾ, ಸಾಂಬಾರ ಪದಾರ್ಥಗಳ ಮೇಲಿನ ಆಮದು ಸುಂಕ ಇಳಿಕೆಗೆ ಮುಂದಾದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ದೊನಾಲ್ಡ್‌ ಟ್ರಂಪ್‌ ಇದೀಗ ಭಾರತೀಯ ಸಾಂಬಾರ ಪದಾರ್ಥಗಳ ಮೇಲಿನ ಸುಂಕವನ್ನು ಇಳಿಸುವ ನಿರ್ಧಾರ ಕೈಗೊಂಡಿದ್ದಾರೆ.

ಸುಂಕಗಳ ಕಾರಣದಿಂದಾಗಿ ದೇಶೀಯ ಬೆಲೆಗಳು ಏರುತ್ತಿರುವುದರ ಬಿಸಿ ತಟ್ಟಿರುವ ಕಾರಣದಿಂದ ಸುಮಾರು 200 ಆಹಾರ, ಕೃಷಿ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಟ್ರಂಪ್‌ ನಿರ್ಧರಿಸಿದ್ದಾರೆ. ಇದರಿಂದ ಭಾರತೀಯ ಮಸಾಲೆ ವ್ಯಾಪಾರಿಗಳು ಮತ್ತು ಚಹಾ ಬೆಳೆಗಾರರು ಸೇರಿದಂತೆ ಜಾಗತಿಕ ರಫ್ತುದಾರರಿಗೆ ಮತ್ತು ಅಮೆರಿಕದ ಗ್ರಾಹಕರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.

ಈ ಪಟ್ಟಿಯಲ್ಲಿ ಕರಿ ಮೆಣಸು, ಲವಂಗ, ಜೀರಿಗೆ, ಏಲಕ್ಕಿ, ಅರಿಶಿನ, ಶುಂಠಿ, ವಿವಿಧ ಬಗೆಯ ಚಹಾ, ಮಾವಿನ ಹಣ್ಣಿನ ಉತ್ಪನ್ನಗಳು ಮತ್ತು ಗೋಡಂಬಿ ಸೇರಿದಂತೆ ಕೆಲವು ಬಗೆಯ ಬೀಜಗಳು ಸೇರಿವೆ. ಇವೆಲ್ಲವನ್ನೂ ಭಾರತ ಅಮೆರಿಕಕ್ಕೆ ರಫ್ತು ಮಾಡುತ್ತದೆ.

2024 ರಲ್ಲಿ ಭಾರತದಿಂದ ಅಮೆರಿಕಕ್ಕೆ 500 ದಶಲಕ್ಷ ಡಾಲರ್‌ಗಿಂತ ಹೆಚ್ಚು ಮೌಲ್ಯದ ಮಸಾಲೆಗಳನ್ನು ರಫ್ತು ಮಾಡಲಾಗಿತ್ತು. ಇದೇ ಅವಧಿಯಲ್ಲಿ ಭಾರತದಿಂದ ಚಹಾ ಮತ್ತು ಕಾಫಿ ಆಮದು ಮೌಲ್ಯ ಸುಮಾರು 83 ದಶಲಕ್ಷ ಡಾಲರ್‌ ಇತ್ತು. ಅಲ್ಲದೆ, ಅಮೆರಿಕವು ವಿಶ್ವದಾದ್ಯಂತ ಒಟ್ಟು 843 ದಶಲಕ್ಷ ಡಾಲರ್‌ ಮೌಲ್ಯದ ತಾಜಾ ಅಥವಾ ಒಣ ಗೋಡಂಬಿ ಆಮದು ಮಾಡಿಕೊಂಡಿದ್ದು, ಇದರಲ್ಲಿ ಭಾರತದ ಪಾಲು ಸುಮಾರು 20% ರಷ್ಟಿದೆ. ಈ ಗೋಡಂಬಿಗೂ ಸುಂಕದಿಂದ ವಿನಾಯಿತಿ ಸಿಕ್ಕಿದೆ.

ಯಾವ ಉತ್ಪನ್ನಗಳಿಗೆ ವಿನಾಯಿತಿ ಸಿಕ್ಕಿಲ್ಲ?
ಭಾರತದಿಂದ ಅಮೆರಿಕಕ್ಕೆ ಬಹು-ಶತಕೋಟಿ ಡಾಲರ್ ರಫ್ತುಗಳಾಗಿರುವ ಸೀಫುಡ್ (ವಿಶೇಷವಾಗಿ ಸಿಗಡಿ) ಮತ್ತು ಬಾಸ್ಮತಿ ಅಕ್ಕಿಗೆ ಮಾತ್ರ ಸುಂಕ ವಿನಾಯಿತಿ ಸಿಕ್ಕಿಲ್ಲ. ಅದೇ ರೀತಿ, ಭಾರತೀಯ ರತ್ನಗಳು, ಆಭರಣಗಳು ಮತ್ತು ಉಡುಪುಗಳ ಮೇಲಿನ 50% ಯುಎಸ್ ಸುಂಕ ನಿರ್ಬಂಧಗಳು ಸಹ ಮುಂದುವರಿದಿವೆದೆಹಲಿ ರಷ್ಯಾದ ತೈಲ ಆಮದನ್ನು ನಿಲ್ಲಿಸಿ, ಅಮೆರಿದಕ ಇಂಧನವನ್ನು ಹೆಚ್ಚು ಖರೀದಿಸಲು ಮುಂದಾದರೆ ಮಾತ್ರ ವ್ಯಾಪಾರ ಒಪ್ಪಂದ ಸಾಧ್ಯ ಎಂದು ಟ್ರಂಪ್ ಹೇಳಿದ್ದಾರೆ.

ಈ ಸುಂಕ ವಿನಾಯಿತಿಗಳು ಭಾರತದಿಂದ ಸುಮಾರು 1 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಕೃಷಿ ರಫ್ತುಗಳಿಗೆ ಮಾತ್ರ ಅನ್ವಯಿಸುತ್ತವೆ.

ಭಾರತ ಸರ್ಕಾರದ ಅಧಿಕಾರಿಗಳ ಪ್ರಕಾರ, ಕಳೆದ ವರ್ಷ 491 ದಶಲಕ್ಷ ಡಾಲರ್‌ ಮೌಲ್ಯದ ರಫ್ತು ಹೊಂದಿದ್ದ 50 ಸಂಸ್ಕರಿಸಿದ ಆಹಾರ ಉತ್ಪನ್ನಗಳು (ಕಾಫಿ ಮತ್ತು ಚಹಾ ಸಾರಗಳು, ಕೋಕೋ ಉತ್ಪನ್ನಗಳು, ರಸಗಳು, ಹಣ್ಣಿನ ತಿರುಳುಗಳು, ಮಾವಿನ ಉತ್ಪನ್ನಗಳು ಮತ್ತು ತರಕಾರಿ ಮೇಣಗಳು ಸೇರಿದಂತೆ) ಹೆಚ್ಚು ಪ್ರಯೋಜನ ಪಡೆಯಲಿವೆ. ನಂತರದ ಸ್ಥಾನದಲ್ಲಿ, ಕಳೆದ ವರ್ಷ 359 ದಶಲಕ್ಷ ಡಾಲರ್‌ ರಫ್ತು ಹೊಂದಿದ್ದ ಮಸಾಲೆಗಳು ಇವೆ. 48 ಹಣ್ಣುಗಳು ಮತ್ತು ಬೀಜಗಳು (ತೆಂಗಿನಕಾಯಿ, ಸೀಬೆ, ಮಾವು, ಗೋಡಂಬಿ, ಬಾಳೆಹಣ್ಣು, ಅಡಿಕೆ ಮತ್ತು ಅನಾನಸ್) ಸಹ ಇದರಿಂದ ಪ್ರಯೋಜನ ಪಡೆಯಲಿವೆ. ಇವುಗಳ ರಫ್ತು ಮೌಲ್ಯ ಸುಮಾರು 55 ದಶಲಕ್ಷ ಡಾಲರ್‌ ಎಂದು ಅಂದಾಜಿಸಲಾಗಿದೆ. ಇದು ಭಾರತದ ಒಟ್ಟು 5.7 ಶತಕೋಟಿ ಡಾಲರ್‌ ಕೃಷಿ ರಫ್ತಿನ ಸುಮಾರು ಐದನೇ ಒಂದು ಭಾಗದಷ್ಟಿದೆ. ವಿನಾಯಿತಿ ಪಡೆದ ಉತ್ಪನ್ನಗಳು ಕಳೆದ ವರ್ಷದ ಭಾರತದ $86 ಶತಕೋಟಿ ಸರಕುಗಳ ರಫ್ತಿನ ಸುಮಾರು 40% ರಷ್ಟಿದೆ.

Most Read

error: Content is protected !!