ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಅಮೆರಿಕ ರಾಷ್ಟ್ರಗಳು ನಿಜವಾದ ಸ್ನೇಹಿತರು ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ.
ದೆಹಲಿಯ ಅಮೆರಿಕ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಗೋರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವಿನ ವೈಯಕ್ತಿಕ ಸ್ನೇಹ ನಿಜವಾದದ್ದು, ಮುಂದಿನ ವರ್ಷದ ಒಳಗಡೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ. “ನಿಜವಾದ ಸ್ನೇಹಿತರ ನಡುವೆ ಭಿನ್ನಾಭಿಪ್ರಾಯಗಳು ಇದ್ದರೂ, ಅವುಗಳನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯ ಇರುತ್ತದೆ” ಎಂದು ಅವರು ಹೇಳಿದರು. ಅಮೆರಿಕಕ್ಕೆ ಭಾರತಕ್ಕಿಂತ ಪ್ರಮುಖ ಪಾಲುದಾರ ಮತ್ತೊಬ್ಬರಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಇಂದಿನಿಂದಲೇ ಭಾರತ–ಅಮೆರಿಕ ನಡುವಿನ ಮುಂದಿನ ಹಂತದ ವ್ಯಾಪಾರ ಒಪ್ಪಂದ ಮಾತುಕತೆಗಳು ಪುನರಾರಂಭವಾಗಲಿವೆ ಎಂದು ಗೋರ್ ಘೋಷಿಸಿದರು. ವ್ಯಾಪಾರ ಮಾತ್ರವಲ್ಲದೆ, ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ಎರಡೂ ದೇಶಗಳು ನಿಕಟವಾಗಿ ಸಹಕರಿಸುತ್ತಿವೆ ಎಂದು ಹೇಳಿದರು.
ಇದೇ ವೇಳೆ, ಭಾರತವನ್ನು ‘ಪ್ಯಾಕ್ಸ್ ಸಿಲಿಕಾ’ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ನಿರ್ಧಾರವನ್ನು ಗೋರ್ ಪ್ರಕಟಿಸಿದರು. ಮುಂದಿನ ತಿಂಗಳು ಭಾರತಕ್ಕೆ ಈ ಗುಂಪಿನ ಪೂರ್ಣ ಸದಸ್ಯತ್ವಕ್ಕೆ ಆಹ್ವಾನ ನೀಡಲಾಗುವುದು ಎಂದರು.

