Tuesday, November 4, 2025

ತೊಟ್ಟಿಲನ್ನೂ ತೂಗಿ, ಮಗುವನ್ನೂ ಚಿವುಟಿದ ಟ್ರಂಪ್ ತಂತ್ರ: ಹಳೆ ರಾಗದಲ್ಲಿ ಕದನ ವಿರಾಮ ಕಥೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಮಹಾನ್ ವ್ಯಕ್ತಿ’ ಮತ್ತು ‘ಅತ್ಯಂತ ಸುಂದರವಾದ, ಆದರೆ ಕಠಿಣ ವ್ಯಕ್ತಿ’ ಎಂದು ಬಣ್ಣಿಸಿ ಹೊಗಳಿದ್ದಾರೆ. ಆದರೆ, ಈ ಹೊಗಳಿಕೆಯ ಬೆನ್ನಲ್ಲೇ, ಈ ಹಿಂದೆ ಭಾರತದ ಕಟು ಟೀಕೆಗೆ ಗುರಿಯಾಗಿದ್ದ ತಮ್ಮ ಹಳೆಯ ಹೇಳಿಕೆಯನ್ನೂ ಪುನರುಚ್ಚರಿಸುವ ಮೂಲಕ ಮತ್ತೆ ವಿವಾದವನ್ನು ಸೃಷ್ಟಿಸಿದ್ದಾರೆ.

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಗೂ ಮುನ್ನ ದಕ್ಷಿಣ ಕೊರಿಯಾದಲ್ಲಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಯಾವುದೇ ಸಂಘರ್ಷವನ್ನು ಕೊನೆಗೊಳಿಸಲು ತಾವು ವೈಯಕ್ತಿಕವಾಗಿ ಸಹಾಯ ಮಾಡಿದ್ದಾಗಿ ಮತ್ತೆ ಹೇಳಿಕೊಂಡಿದ್ದಾರೆ. “ಪ್ರಧಾನಿ ಮೋದಿ ಅವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ನಮ್ಮ ಮಧ್ಯೆ ಉತ್ತಮ ಸಂಬಂಧವಿದೆ. ಆದರೆ, ನೀವು ಪಾಕಿಸ್ತಾನದೊಂದಿಗೆ ಹೋರಾಡುತ್ತಿರುವ ಕಾರಣ ನಾವು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಮೋದಿ ಅವರಿಗೆ ಕರೆ ಮಾಡಿ ಹೇಳಿದೆ” ಎಂದು ಟ್ರಂಪ್ ಹೇಳಿದ್ದಾರೆ.

ಇದರ ಜೊತೆಗೆ, ಟ್ರಂಪ್ ಅವರು ಭಾರತೀಯ ಸರಕುಗಳ ಮೇಲೆ ಶೇಕಡಾ 25ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಮೂಲಕ ಭಾರತಕ್ಕೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದರಿಂದಲೇ ಭಾರತವು ಪಾಕಿಸ್ತಾನದ ವಿರುದ್ಧದ ‘ಆಪರೇಷನ್ ಸಿಂಧೂರ್’ ಅನ್ನು ನಿಲ್ಲಿಸಿತು ಎಂದು ಹೇಳಿಕೊಂಡಿದ್ದಾರೆ.

ಟ್ರಂಪ್ ಅವರ ಈ ಹೇಳಿಕೆಗಳು ಗಮನಾರ್ಹವಾಗಿವೆ. ಏಕೆಂದರೆ, ಒಂದು ಕಡೆ ಅವರು ಪ್ರಧಾನಿ ಮೋದಿ ಅವರನ್ನು ಗುಣಗಾನ ಮಾಡಿ, ಅಮೆರಿಕವು ಭಾರತದೊಂದಿಗೆ ಹೊಸ ವ್ಯಾಪಾರ ಒಪ್ಪಂದದ ಕುರಿತು ಕೆಲಸ ಮಾಡುತ್ತಿದೆ ಎಂದು ಘೋಷಿಸಿದ್ದಾರೆ. ಇನ್ನೊಂದೆಡೆ, ಭಾರತ-ಪಾಕ್ ಕದನವಿರಾಮದಲ್ಲಿ ತಮ್ಮ ಪಾತ್ರವನ್ನು ಪ್ರತಿಪಾದಿಸಿ ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ. ಹಿಂದೆ, ಅಮೆರಿಕವು ರಷ್ಯಾದಿಂದ ಇಂಧನ ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ತೆರಿಗೆ ವಿಧಿಸಿದ ನಂತರ ಎರಡೂ ದೇಶಗಳ ನಡುವೆ ಅಂತರ ಉಂಟಾಗಿತ್ತು.

ಆದರೆ, ಟ್ರಂಪ್ ಈ ಹಿಂದೆ ಕೂಡ ಇದೇ ರೀತಿ ಹೇಳಿಕೆ ನೀಡಿದಾಗ ಭಾರತವು ಅದನ್ನು ಬಲವಾಗಿ ಮತ್ತು ಸಾರಾಸಗಟಾಗಿ ನಿರಾಕರಿಸಿತ್ತು. “ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದವು ಯಾವುದೇ ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆ ಇಲ್ಲದೆ, ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ಮಾಡಲ್ಪಟ್ಟಿದೆ” ಎಂದು ಭಾರತ ಸ್ಪಷ್ಟಪಡಿಸಿದೆ.

ಹೀಗಿದ್ದರೂ, ಮಾಜಿ ಅಧ್ಯಕ್ಷ ಟ್ರಂಪ್ ಮಾತ್ರ ತಮ್ಮ ಹಳೆಯ ನಿಲುವಿನಿಂದ ಹಿಂದೆ ಸರಿದಿಲ್ಲ. ಮೋದಿಯವರನ್ನು ಹೊಗಳಿ, ಆ ಬಳಿಕ ಭಾರತದ ಮೇಲೆ ವ್ಯಾಪಾರ ನಿರ್ಬಂಧಗಳ ಬೆದರಿಕೆಯ ಮೂಲಕ ಕದನ ವಿರಾಮಕ್ಕೆ ಒತ್ತಾಯಿಸಿದ್ದಾಗಿ ಹೇಳಿಕೊಂಡಿರುವ ಟ್ರಂಪ್, ರಾಜತಾಂತ್ರಿಕ ವಲಯದಲ್ಲಿ ‘ತೊಟ್ಟಿಲನ್ನೂ ತೂಗಿ, ಮಗುವನ್ನೂ ಚಿವುಟಿದ’ ತಂತ್ರ ಅನುಸರಿಸಿದ್ದಾರೆ.

error: Content is protected !!