ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಾಡಿನಲ್ಲಿ ತುಳಸಿ ಹಬ್ಬದ ಸಂಭ್ರಮ. ಈ ಹಬ್ಬ ಹಿಂದು ಧರ್ಮದಲ್ಲಿ ಒಂದು ಪ್ರಮುಖ ಮತ್ತು ಪವಿತ್ರ ಹಬ್ಬವಾಗಿದ್ದು, ದೀಪಾವಳಿಯ ನಂತರ ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ಈ ಹಬ್ಬದಲ್ಲಿ ತುಳಸಿ ಗಿಡಕ್ಕೆ ವಿಶೇಷ ಪೂಜೆ ನಡೆಸಲಾಗುತ್ತದೆ.
ಪ್ರತಿಯೊಂದು ಹಿಂದು ಮನೆಗಳಲ್ಲಿ ಅಂಗಳದಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಮುಂಜಾನೆ ಎದ್ದು ತುಳಸಿ ಗಿಡಕ್ಕೆ ಪೂಜೆ ಮಾಡಿದ ನಂತರ ದಿನವನ್ನು ಆರಂಭಿಸುವ ವಾಡಿಕೆ. ಅದರಂತೆ ತುಳಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಹಿಂದು ಪುರಾಣಗಳ ಪ್ರಕಾರ ತುಳಸಿ ದೇವಿ ಮಹಾಲಕ್ಷ್ಮಿಯ ಅವತಾರ. ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದ ದೇವಿಯಾದ್ದರಿಂದ, ತುಳಸಿ ಇಲ್ಲದೆ ವಿಷ್ಣು ಪೂಜೆಯೇ ಅಪೂರ್ಣ. ಮನೆಯ ಮಡಿಲಿನ ತುಳಸಿ ಕೇವಲ ಒಂದು ಗಿಡವಲ್ಲ – ಅದು ಶುದ್ಧತೆ, ಧನಾತ್ಮಕ ಶಕ್ತಿ ಮತ್ತು ದೈವಾನುಗ್ರಹದ ಪ್ರತೀಕವಾಗಿದೆ. ತುಳಸಿ ಸಮೀಪದಲ್ಲಿ ಮಾಡಿದ ಪ್ರಾರ್ಥನೆ ಮನಸ್ಸಿಗೆ ಶಾಂತಿ ನೀಡುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಧ್ಯಾನದಂತೆ ಆಂತರಿಕ ಶುದ್ಧತೆಯನ್ನು ಉಂಟುಮಾಡುತ್ತದೆ.
ಈ ದಿನ ಸಾಲಿಗ್ರಾಮಕ್ಕೂ ತುಳಸಿಗೂ ವಿವಾಹವನ್ನು ಮಾಡಿಸಲಾಗುತ್ತದೆ. ಈ ದಿನ ತುಳಸಿ ಮತ್ತು ಸಾಲಿಗ್ರಾಮಕ್ಕೂ ವಿವಾಹ ಮಾಡಿಸುವುದು ಕನ್ಯಾದಾನ ಮಾಡಿದಷ್ಟು ಪುಣ್ಯವನ್ನು ತಂದುಕೊಡುತ್ತದೆ. ವಿವಾಹದಲ್ಲಿ ಎದುರಾಗುವಂತಹ ಸಮಸ್ಯೆಗಳು ದೂರಾಗುತ್ತದೆ.
ತುಳಸಿ ಹಬ್ಬದ ದಿನದಂದು, ಪೂಜೆಗೆ ಮೊದಲು ತುಳಸಿ ಕಟ್ಟೆಯನ್ನು ಸ್ವಚ್ಛಗೊಳಿಸಿ. ಬಳಿಕ ಅರಿಶಿನ, ಕುಂಕುಮ ಮತ್ತು ಶ್ರೀಗಂಧದಿಂದ ಅಲಂಕರಿಸಿ. ಸಾಲಿಗ್ರಾಮ ಕಲ್ಲನ್ನು ಗಂಗಾ ಜಲದಿಂದ ತೊಳೆದು ಸ್ವಚ್ಛಗೊಳಿಸಿ ಮತ್ತು ತುಳಸಿ ಎಲೆಗಳಿಂದ ಅಲಂಕರಿಸಿ. ಬಳಿಕ ತುಳಸಿ ಕಟ್ಟೆಯ ಸುತ್ತ ಸಣ್ಣ ಮಂಟಪವನ್ನು ಸಿದ್ಧಪಡಿಸಿ. ಮಂಟಪವನ್ನು ಹೂವುಗಳಿಂದ ಅಲಂಕರಿಸಬೇಕು.
ಸಾಮಾನ್ಯವಾಗಿ ತುಳಸಿಗಿಡ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡದ ಕೊಂಬೆ ಇಡುತ್ತಾರೆ. ಈ ಬೆಟ್ಟದ ನೆಲ್ಲಿಕಾಯಿ ಕೊಂಬೆಯಲ್ಲಿ ವಿಷ್ಣುವಿನ ಸಾನಿಧ್ಯವಿದೆ ಎಂದು ನಂಬಲಾಗಿದೆ. ಹೀಗಾಗಿ ತುಳಸಿ ಗಿಡದ ಪಕ್ಕದಲ್ಲಿ ಈ ಬೆಟ್ಟದ ನೆಲ್ಲಿಕಾಯಿ ಗಿಡದ ಕೊಂಬೆ ಇಟ್ಟು ಪೂಜೆ ಮಾಡಲಾಗುತ್ತದೆ.
ಇದಲ್ಲದೆ ಅರಿಶಿಣ ಕೊಂಬು, ಮೊಸರು ಮತ್ತು ಹೆಸರುಕಾಳುಗಳನ್ನು ಇಟ್ಟು ಪೂಜಿಸಬೇಕು. ನೈವೇದ್ಯಕ್ಕಾಗಿ ಹೆಸರುಬೇಳೆ ಕೋಸಂಬರಿ ಮತ್ತು ಬೆಲ್ಲ ಪಾನಕವನ್ನು ಇಡಲಾಗುತ್ತದೆ. ಹೆಸರುಬೇಳೆ ಕೋಸಂಬರಿಗೆ ಉಪ್ಪು ಹಾಕಬಾರದು. ಪೂಜೆಯ ನಂತರ ಬೇಕಿದ್ದಲ್ಲಿ ಉಪ್ಪು ಸೇರಿಸಿ ಸೇವಿಸಬಹುದು.

