ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಸಸ್ಯಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ಹಿಂದು ಧರ್ಮದಲ್ಲಿ ತುಳಸಿಯನ್ನು ದೇವಿ ಲಕ್ಷ್ಮಿಯ ಅವತಾರವೆಂದು ಪೂಜಿಸಲಾಗುತ್ತದೆ. ಪ್ರತಿವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ದಿನ ತುಳಸಿ ಪೂಜೆ ಅಥವಾ ತುಳಸಿ ಹಬ್ಬವನ್ನು ಆಚರಿಸುವ ಸಂಪ್ರದಾಯ ಸಾವಿರಾರು ವರ್ಷಗಳ ಹಿಂದಿನಿಂದ ಬಂದಿದೆ. ಈ ಹಬ್ಬವು ಭಕ್ತಿ, ಪಾವಿತ್ರ್ಯ ಮತ್ತು ಕುಟುಂಬದ ಕಲ್ಯಾಣದ ಸಂಕೇತವಾಗಿದೆ.
ತುಳಸಿ ಪೂಜೆಯ ಇತಿಹಾಸ:
ಪುರಾಣಗಳ ಪ್ರಕಾರ, ತುಳಸಿ ದೇವಿ ಮೂಲತಃ ಧರ್ಮನಿಷ್ಠಳಾದ ಮಹಿಳೆ “ವೃಂದಾ”. ಅವಳು ಅಸುರ ಜಲಂಧರನ ಪತ್ನಿಯಾಗಿದ್ದಳು. ಜಲಂಧರನ ಅಹಂಕಾರ ಮತ್ತು ದುಷ್ಟತನದಿಂದ ದೇವತೆಗಳು ತೊಂದರೆಗೊಳಗಾದಾಗ, ವಿಷ್ಣು ಭಗವಾನ್ ವೃಂದಾದ ಶ್ರದ್ಧೆಗೆ ಪರೀಕ್ಷೆ ಇಟ್ಟರು. ಪರೀಕ್ಷೆಯಲ್ಲಿ ವೃಂದಾ ವಂಚನೆಯನ್ನು ಅರಿತುಕೊಂಡಾಗ, ಅವಳು ವಿಷ್ಣುವನ್ನು ತಕ್ಷಣವೇ ಶಿಲೆಯಾಗುವಂತೆ ಶಪಿಸಿದಳು. ಅವಳ ಶಾಪದ ನಂತರ, ಲಕ್ಷ್ಮಿ ದೇವಿಯು ವಿಷ್ಣುವನ್ನು ಶಾಪದಿಂದ ಬಿಡುಗಡೆ ಮಾಡುವಂತೆ ವೃಂದಾಳನ್ನು ಪ್ರಾರ್ಥಿಸಿದಳು. ವೃಂದಾ ಅಂತಿಮವಾಗಿ ಒಪ್ಪಿದಳು, ಆದರೆ ಅವಳು ಬೆಂಕಿಯನ್ನು ಪ್ರವೇಶಿಸುವ ಮೂಲಕ ತನ್ನನ್ನು ತಾನು ತ್ಯಾಗ ಮಾಡಿದಳು. ಆಕೆಯ ಚಿತೆಯ ಬೂದಿಯಿಂದ ತುಳಸಿ ಎಂಬ ಪವಿತ್ರ ಸಸ್ಯ ಹೊರಹೊಮ್ಮಿತು ಎನ್ನಲಾಗುತ್ತದೆ. ಹೀಗಾಗಿ ಪ್ರತಿವರ್ಷ ತುಳಸಿ ವಿವಾಹದ ರೂಪದಲ್ಲಿ ಆಕೆಯ ಪೂಜೆಯನ್ನು ಮಾಡಬೇಕು ಎಂದು ಹೇಳುತ್ತಾನೆ ಇದೇ ತುಳಸಿ ಪೂಜೆಯ ಆದ್ಯ ಪರಂಪರೆ.
ತುಳಸಿ ಪೂಜೆಯ ಮಹತ್ವ
- ಆಧ್ಯಾತ್ಮಿಕ ಶುದ್ಧತೆ: ತುಳಸಿ ಸಸ್ಯದ ಸಮ್ಮುಖದಲ್ಲಿ ಪೂಜೆ ಮಾಡಿದರೆ ಮನಸ್ಸು ಶಾಂತಿಯಾಗುತ್ತದೆ, ಮನಸ್ಸಿನ ಅಶುದ್ಧತೆ ದೂರವಾಗುತ್ತದೆ ಎಂದು ನಂಬಿಕೆ.
- ಆರೋಗ್ಯದ ದೃಷ್ಟಿಯಿಂದ: ತುಳಸಿ ಸಸ್ಯದ ವಾತಾವರಣವು ಹಾನಿಕರ ಬ್ಯಾಕ್ಟೀರಿಯಾಗಳನ್ನು ದೂರ ಮಾಡುತ್ತದೆ. ಇದು ಶರೀರಕ್ಕೆ ಔಷಧೀಯ ಪ್ರಯೋಜನ ನೀಡುತ್ತದೆ.
- ಪರಿಸರದ ಶುದ್ಧತೆ: ತುಳಸಿ ಸಸ್ಯವು ಆಮ್ಲಜನಕವನ್ನು ಹೆಚ್ಚು ಬಿಡುಗಡೆ ಮಾಡುತ್ತದೆ, ಇದರಿಂದ ಮನೆಯಲ್ಲಿ ಹಸಿರುತನ ಮತ್ತು ಶುದ್ಧ ವಾತಾವರಣ ಉಂಟಾಗುತ್ತದೆ.
- ಕುಟುಂಬದ ಕಲ್ಯಾಣ: ತುಳಸಿ ಪೂಜೆಯಿಂದ ಕುಟುಂಬದಲ್ಲಿ ಐಶ್ವರ್ಯ, ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.
- ಧಾರ್ಮಿಕ ಪ್ರಾಮುಖ್ಯತೆ: ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ದೊರಕಲು ತುಳಸಿ ಪೂಜೆಯನ್ನು ಅತ್ಯಂತ ಶ್ರೇಷ್ಠ ವಿಧಾನವೆಂದು ಪುರಾಣಗಳು ಹೇಳುತ್ತವೆ.
ತುಳಸಿ ಪೂಜೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಮನಸ್ಸಿನ ಶ್ರದ್ಧೆ ಮತ್ತು ಪ್ರಕೃತಿಯೊಂದಿಗೆ ಒಗ್ಗುವ ಸಂಸ್ಕೃತಿಯ ಭಾಗವಾಗಿದೆ. ಹೀಗಾಗಿ ತುಳಸಿ ಪೂಜೆಯು ನಮ್ಮ ಮನೆಗೆ ಕೇವಲ ದೈವಿಕ ಶಕ್ತಿ ತರುವುದಲ್ಲದೆ, ಆರೋಗ್ಯಕರ ಹಾಗೂ ಹಸಿರು ಜೀವನಶೈಲಿಯ ಪಾಠವನ್ನೂ ನೀಡುತ್ತದೆ.

