ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯನಗರದ ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ.
ತನ್ನ ತಂಗಿ ಗರ್ಭಿಣಿಯಾಗಿದ್ದಳು ಎಂಬ ಕಥೆ ಕಟ್ಟಿ ಪೊಲೀಸರನ್ನು ನಂಬಿಸಲು ಯತ್ನಿಸಿದ್ದ ಹಂತಕ ಅಕ್ಷಯ್‌ನ ಅಸಲಿ ಮುಖವಾಡ ಕಳಚಿದೆ. ಈ ಭೀಕರ ಕೃತ್ಯದ ಹಿಂದೆ ಮರ್ಯಾದೆ ಹತ್ಯೆಯ ಕಾರಣವಿಲ್ಲ, ಬದಲಿಗೆ ಬರೋಬ್ಬರಿ 1.20 ಕೋಟಿ ರೂಪಾಯಿ ಎಫ್‌ಡಿ ಹಣದಾಸೆಗೆ ಕೃತ್ಯ ಎಸಗಿದ್ದಾನೆ ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬಯಲಾಗಿದೆ.
ತಂದೆ-ತಾಯಿ ಮತ್ತು ತಂಗಿಯನ್ನು ಕೊಲೆಗೈದಿದ್ದ ಆರೋಪಿ ಅಕ್ಷಯ್, ತನ್ನ ತಂಗಿಯ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ. ಆದರೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ಕೋಟಿ ಕೋಟಿ ಹಣದ ವ್ಯವಹಾರ ಬೆಳಕಿಗೆ ಬಂದಿದೆ.
ಹಂತಕ ಅಕ್ಷಯ್‌ಗೆ ಆತನ ಮಾವ ವಸಂತ್ ಕುಮಾರ್ ಸಹಾಯ ಮಾಡಿದ್ದು, ಇಬ್ಬರೂ ಸೇರಿ ಈ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಹರಪ್ಪನಹಳ್ಳಿಯಲ್ಲಿದ್ದ ಡೂಪ್ಲೆಕ್ಸ್ ಮನೆಯನ್ನು ಮಾರಾಟ ಮಾಡಿದ್ದ ತಂದೆ, ಬಂದ ಹಣದಲ್ಲಿ ಸುಮಾರು 1.20 ಕೋಟಿ ರೂ.ಗಳನ್ನು ಫಿಕ್ಸೆಡ್ ಡಿಪಾಸಿಟ್ ಮಾಡಿದ್ದರು. ಈ ಹಣದ ಮೇಲೆ ಕಣ್ಣಿಟ್ಟಿದ್ದ ಅಕ್ಷಯ್, ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.
ತಂದೆ ರಾಜಶೇಖರ್ ಅವರು ತನ್ನ ಮಗಳ ಭವಿಷ್ಯ ಮತ್ತು ವಿದ್ಯಾಭ್ಯಾಸಕ್ಕಾಗಿ ಸುಮಾರು 50 ಲಕ್ಷ ರೂಪಾಯಿ ಹಣವನ್ನು ಆಕೆಯ ಹೆಸರಿನಲ್ಲಿ ಎಫ್‌ಡಿ ಮಾಡಿದ್ದರು. ಮನೆ ಮಾರಾಟದ ಉಳಿದ ಹಣವನ್ನೂ ಸಹ ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದರು. ಕುಡಿತದ ಚಟಕ್ಕೆ ಬಿದ್ದಿದ್ದ ಅಕ್ಷಯ್‌ಗೆ ಹಣ ನೀಡಲು ತಂದೆ ನಿರಾಕರಿಸಿದ್ದರು. ಇದರಿಂದ ತಂದೆ ಮತ್ತು ಮಗನ ನಡುವೆ ತೀವ್ರ ಗಲಾಟೆಗಳು ನಡೆಯುತ್ತಿದ್ದವು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಮಾವ ವಸಂತ್ ಕುಮಾರ್, ಅಳಿಯನಿಗೆ ಕುಮ್ಮಕ್ಕು ನೀಡಿ ಮೂವರನ್ನೂ ಮುಗಿಸುವ ಪ್ಲಾನ್ ಹಾಕಿಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಆದ್ರೆ ಈತ ಪೊಲೀಸರ ದಿಕ್ಕು ತಪ್ಪಿಸಲು ತನ್ನ ತಂಗಿ ಯುವಕನೊಬ್ಬನ ಜತೆ ಸಂಬಂಧ ಬೆಳೆಸಿ ಗರ್ಭಿಣಿಯಾಗಿದ್ದಳು. ಇದರಿಂದ ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ಈ ಕೆಲಸ ಮಾಡಿದೆ ಎಂದು ಸುಳ್ಳು ಕತೆ ಸೃಷ್ಟಿಸಿದ್ದ. ಆದರೆ ವೈದ್ಯಕೀಯ ಪರೀಕ್ಷೆ ಮತ್ತು ತನಿಖೆಯ ವೇಳೆ ಈ ಆರೋಪ ಸುಳ್ಳೆಂದು ಸಾಬೀತಾಗಿದೆ.



