ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಡ್ಡಾಯ ಪರವಾನಗಿ ಮತ್ತು ತರಬೇತಿ ನಿಯಮಗಳನ್ನು ಉಲ್ಲಂಘಿಸಿ ವಿಮಾನ ಹಾರಾಟ ನಡೆಸಿದ ಆರೋಪದ ಮೇಲೆ ಏರ್ ಇಂಡಿಯಾದ ಇಬ್ಬರು ಪೈಲಟ್‌ಗಳನ್ನು ಹಾರಾಟ ಕರ್ತವ್ಯದಿಂದ ವಜಾಮಾಡಲಾಗಿದೆ.
ಐದು ತಿಂಗಳ ಹಿಂದೆ ವೇಳಾಪಟ್ಟಿ ಮತ್ತು ಕರ್ತವ್ಯ ನಿಯೋಜನೆಯ ಲೋಪಗಳಿಗಾಗಿ ನಿಯಂತ್ರಕ ಸಂಸ್ಥೆಯಿಂದ ಎಚ್ಚರಿಕೆ ಪಡೆದಿದ್ದರೂ, ಏರ್ ಇಂಡಿಯಾದಲ್ಲಿ ಇಂತಹ ತಪ್ಪುಗಳು ಮುಂದುವರಿದಿವೆ.
ಒಬ್ಬ ಹಿರಿಯ ಕಮಾಂಡರ್, ತಮ್ಮ ‘ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ’ (English Language Proficiency – ELP) ಪರವಾನಗಿಯ ಅವಧಿ ಮುಗಿದಿದ್ದರೂ, ಏರ್‌ಬಸ್ A320 ವಿಮಾನದ ಪೈಲಟ್-ಇನ್-ಕಮಾಂಡ್ ಆಗಿ ಕಾರ್ಯನಿರ್ವಹಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, “ಈ ದೋಷ ನಮ್ಮ ಗಮನಕ್ಕೆ ಬಂದ ತಕ್ಷಣ, ಹಿರಿಯ ಪೈಲಟ್ ಅವರನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ DGCAಗೆ ವರದಿ ಮಾಡಲಾಗಿದೆ,” ಎಂದು ತಿಳಿಸಿದೆ.
ಇನ್ನೊಂದು ಪ್ರಕರಣದಲ್ಲಿ, ಒಬ್ಬ ಸಹ-ಪೈಲಟ್ ದ್ವೈವಾರ್ಷಿಕ ‘ ಪೈಲಟ್ ಪ್ರಾವೀಣ್ಯತಾ ಪರೀಕ್ಷೆ – ಇನ್‌ಸ್ಟ್ರುಮೆಂಟ್ ರೇಟಿಂಗ್’ (PPC-IR) ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ನಿಯಮಗಳ ಪ್ರಕಾರ, ಪರೀಕ್ಷೆಯಲ್ಲಿ ವಿಫಲರಾದ ಪೈಲಟ್‌ಗಳು ಕಡ್ಡಾಯವಾಗಿ ಮತ್ತೊಮ್ಮೆ ತರಬೇತಿ ಪಡೆದು, ಮತ್ತೆ ಪರೀಕ್ಷೆಯಲ್ಲಿ ತೃಪ್ತಿದಾಯಕ ಮಟ್ಟದಲ್ಲಿ ಉತ್ತೀರ್ಣರಾದ ನಂತರವೇ ವಿಮಾನ ಹಾರಾಟ ನಡೆಸಬೇಕು. ಆದರೆ, ಈ ಸಹ-ಪೈಲಟ್ ಯಾವುದೇ ತರಬೇತಿ ಪಡೆಯದೆ ಏರ್‌ಬಸ್ A320 ವಿಮಾನವನ್ನು ಹಾರಾಟ ನಡೆಸಿದ್ದರು. ಇದನ್ನು ಅಧಿಕಾರಿಗಳು ಅತ್ಯಂತ ಗಂಭೀರ ಲೋಪವೆಂದು ಪರಿಗಣಿಸಿದ್ದಾರೆ.
ಡಿಜಿಸಿಎದಿಂದ ಕಠಿಣ ಎಚ್ಚರಿಕೆ
ಈ ರೀತಿಯ ಲೋಪಗಳು ಏರ್ ಇಂಡಿಯಾದಲ್ಲಿನ ಮೇಲ್ವಿಚಾರಣಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಹಿರಿಯ ಪೈಲಟ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಈ ಗಂಭೀರ ಲೋಪದ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತನಿಖೆ ಆರಂಭಿಸಿದೆ.

                                    