ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಟವಾಡುತ್ತ ಕೆರೆಯತ್ತ ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ನಡೆದಿದೆ.
ಮೃತರನ್ನು ಅನಿಕೇತ್ ಕುಮಾರ್ (12) ಮತ್ತು ರೆಹಮಾತ್ ಬಾಬಾ (11) ಎಂದು ಗುರುತಿಸಲಾಗಿದೆ. ಅನಿಕೇತ್ ಬಿಹಾರ ಮೂಲದವರು, ರೆಹಮಾತ್ ಬಾಬಾ ಆಂಧ್ರಪ್ರದೇಶದ ಕದಿರಿ ಮೂಲದವರು ಎಂದು ತಿಳಿದುಬಂದಿದೆ.
ಮಕ್ಕಳ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಿನ್ನೆ ಸಂಜೆ ಮನೆಯ ಬಳಿಯೇ ಆಟವಾಡುತ್ತಿದ್ದ ಈ ಇಬ್ಬರು ಬಾಲಕರು, ಆಟದ ನಡುವೆ ಕೆರೆಯ ಬಳಿ ತೆರಳಿದ್ದು, ಅಲ್ಲಿ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಂಜೆಯಾದರೂ ಮಕ್ಕಳು ಮನೆಗೆ ವಾಪಸ್ ಆಗದಿದ್ದ ಕಾರಣ ಪೋಷಕರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದರೂ ಮಕ್ಕಳು ಪತ್ತೆಯಾಗಲಿಲ್ಲ.
ಇಂದು ಬೆಳಿಗ್ಗೆ ಕೆರೆಯಲ್ಲಿ ಮಕ್ಕಳ ಮೃತದೇಹ ತೇಲುತ್ತಿದ್ದ ದೃಶ್ಯ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಅವರು ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಪೋಸ್ಟ್‌ಮಾರ್ಟಮ್‌ಗೆ ಕಳುಹಿಸಿದ್ದಾರೆ.

