January17, 2026
Saturday, January 17, 2026
spot_img

ಹೊಳೆಯಲ್ಲಿ ಈಜಲು ಹೋದ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ನೀರುಪಾಲು

ಹೊಸದಿಗಂತ ಸುಂಟಿಕೊಪ್ಪ:

ಶನಿವಾರ ಮಧ್ಯಾಹ್ನ ಮಾದಾಪುರ ಸಮೀಪದ ಗರಗಂದೂರು ಮಲಿಕಾರ್ಜುನ ಕಾಲೋನಿ ಬಳಿ ನಡೆಯಬಾರದ ದುರಂತವೊಂದು ಸಂಭವಿಸಿದೆ. ಮಾದಾಪುರ ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ನೀರಿನ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಘಟನೆ ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತ ಬಾಲಕರನ್ನು ಸುಂಟಿಕೊಪ್ಪದ ಪಂಪ್‌ಹೌಸ್ ನಿವಾಸಿಗಳಾದ ಶರೀಫ್ ಅವರ ಪುತ್ರ ಮಹಮದ್ ರಾಯಿಜ್ (16) ಮತ್ತು ಸರದಾರ್ ಅವರ ಪುತ್ರ ಮಹಮ್ಮದ್ ನಿಹಾಲ್ (16) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಾದಾಪುರದ ಚೆನ್ನಮ್ಮ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು. ಶನಿವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕಾಲೇಜು ಮುಗಿಸಿ ಮನೆಗೆ ತೆರಳುವ ಬದಲು, ಈಜಾಡುವ ಆಸೆಯಿಂದ ಮಲಿಕಾರ್ಜುನ ಕಾಲೋನಿ ಬಳಿಯ ಹೊಳೆಗೆ ಇಳಿದಿದ್ದರು. ಈ ವೇಳೆ ನೀರಿನ ಸುಳಿಗೆ ಸಿಲುಕಿದ ಬಾಲಕರು ಮೇಲೆ ಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿಗಳ ತಂದೆಯರು ಸುಂಟಿಕೊಪ್ಪದ ಆಟೋಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ನೇತೃತ್ವದ ತಂಡವು ಸ್ಥಳೀಯ ಈಜು ತಜ್ಞರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.

ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಆಟೋ ಚಾಲಕರ ಕುಟುಂಬದ ಈ ಕುಡಿಗಳು ಅಕಾಲಿಕ ಮರಣಕ್ಕೀಡಾಗಿರುವುದು ಸುಂಟಿಕೊಪ್ಪ ಪರಿಸರದಲ್ಲಿ ತೀವ್ರ ಕಂಬನಿಗೆ ಕಾರಣವಾಗಿದೆ.

Must Read

error: Content is protected !!