Wednesday, December 31, 2025

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಎರಡು ವರ್ಷ ಪೂರ್ಣ: ಇದು ನಂಬಿಕೆ, ಪರಂಪರೆಯ ಹಬ್ಬ ಎಂದ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠೆಯಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆಯಿತು.

2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮಲಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗಿತ್ತು. ಆ ಐತಿಹಾಸಿಕ ಕ್ಷಣಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಈ ವರ್ಷದ ವಾರ್ಷಿಕೋತ್ಸವವನ್ನು 2025ರ ಡಿಸೆಂಬರ್ 31ರಂದು ಆಚರಿಸಲಾಗುತ್ತಿದ್ದು, ರಾಮ ಮಂದಿರ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದಾರೆ.

ಅಯೋಧ್ಯೆ ಶ್ರೀರಾಮಂದಿರ ಪ್ರಾಣ ಪ್ರತಿಷ್ಠಾನೆಯ 2ನೇ ವಾರ್ಷಿಕೋತ್ಸವದ ಕುರಿತು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ‘ಇದು ನಂಬಿಕೆ ಮತ್ತು ಪರಂಪರೆಯ ಹಬ್ಬ’ ಎಂದು ವರ್ಣಿಸಿದ್ದಾರೆ. ‘ಪ್ರಭು ಶ್ರೀರಾಮನ ಚರಣಕ್ಕೆ ಹಾಗೂ ದೇಶ-ವಿದೇಶಗಳಲ್ಲಿರುವು ಸಕಲ ರಾಮ ಭಕ್ತರಿಗೂ ನನ್ನ ಕೋಟಿ ಕೋಟಿ ಪ್ರಣಾಮಗಳು’ ಎಂದು ಮೋದಿ ಹೇಳಿದ್ದಾರೆ.

ದಿನವಿಡೀ ಗಣಪತಿ ಪೂಜೆ, ಮಂಡಲ ಪೂಜೆ, ವಿಶೇಷ ಅಭಿಷೇಕ ಹಾಗೂ ಪ್ರಕಟೋತ್ಸವ ಆರತಿ ಸೇರಿದಂತೆ ವಿಶೇಷ ವಿಧಿವಿಧಾನಗಳು ನೆರವೇರಿದವು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂದಿರದಲ್ಲಿ ಪೂಜೆ ಸಲ್ಲಿಸಿ ಬಳಿಕ ಮಾತಾ ಅನ್ನಪೂರ್ಣಾ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಈ ವಿಶೇಷ ದಿನದಂದು ಅಯೋಧ್ಯೆಯಲ್ಲಿ ಭಾರೀ ಜನಸಂದಣಿ ಕಂಡು ಬಂದಿದ್ದು, ಸುಮಾರು 5-6 ಲಕ್ಷ ಭಕ್ತರು ಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

error: Content is protected !!