Wednesday, October 15, 2025

ತೈವಾನ್‌ನಲ್ಲಿ ʻರಗಾಸಾʼ ಚಂಡಮಾರುತಕ್ಕೆ 14 ಬಲಿ, 124 ಮಂದಿ ಕಾಣಿಸ್ತಾ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೈವಾನ್‌ನಲ್ಲಿ ಸಂಭವಿಸಿದ ರಗಾಸಾ ಚಂಡಮಾರುತಕ್ಕೆ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, 124 ಮಂದಿ ಕಾಣೆಯಾಗಿದ್ದಾರೆ. ದುರಂತದಲ್ಲಿ 18 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಸೃಷ್ಟಿಸಿದೆ.

ಚಂಡಮಾರುತದ ಪರಿಣಾಮ ದಕ್ಷಿಣ ತೈವಾನ್‌ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಡಲತೀರದಲ್ಲಿ ಪ್ರವಾಹದಿಂದಾಗಿ ನೂರಾರು ಮರಗಳು ಧರೆಗುರುಳಿವೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ರಾಗಸ’ ಚಂಡಮಾರುತ ಮಂಗಳವಾರ ದಕ್ಷಿಣ ಚೀನಾಕ್ಕೆ ಅಪ್ಪಳಿಸಿದೆ. ಇದರಿಂದಾಗಿ ಹಲವೆಡೆ ವ್ಯಾಪಕ ಮಳೆ ಸುರಿಯುತ್ತಿದೆ. ಚಂಡಮಾರುತ ಬುಧವಾರ ಹಾಂಗ್ ಕಾಂಗ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿವಿಧೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಚೀನಾದ ದಕ್ಷಿಣ ಭಾಗದ ಕನಿಷ್ಠ 10 ನಗರಗಳಲ್ಲಿ ಕಚೇರಿಗಳು ಮತ್ತು ಶಾಲೆಗಳನ್ನು ಮುಚ್ಚುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!