ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಅಸಮಾಧಾನ ಮತ್ತೊಮ್ಮೆ ಸ್ಪಷ್ಟವಾಗಿ ಹೊರಹೊಮ್ಮಿದೆ. ಸೆಪ್ಟೆಂಬರ್ 28ರಂದು ನಡೆದ ಏಷ್ಯಾಕಪ್ ಫೈನಲ್ ಬಳಿಕ ಆರಂಭವಾದ ಟ್ರೋಫಿ ವಿವಾದ ಈಗ ಅಂಡರ್-19 ಏಷ್ಯಾಕಪ್‌ನಲ್ಲೂ ಮುಂದುವರಿದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೈನಿಂದ ಪದಕ ಸ್ವೀಕರಿಸಲು ಭಾರತೀಯ ಯುವ ಆಟಗಾರರು ನಿರಾಕರಿಸಿದ ಘಟನೆ ಗಮನ ಸೆಳೆದಿದೆ.
ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಭಾರತವನ್ನು ಭಾರೀ ಅಂತರದಿಂದ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 348 ರನ್‌ಗಳ ದೊಡ್ಡ ಗುರಿ ನೀಡಿದ್ದು, ಉತ್ತರವಾಗಿ ಟೀಂ ಇಂಡಿಯಾ 156 ರನ್‌ಗಳಿಗೆ ಆಲ್‌ಔಟ್ ಆಯಿತು. ಫೈನಲ್ ಪಂದ್ಯ ಮುಗಿದ ಬಳಿಕ ಪದಕ ಪ್ರದಾನ ಸಮಾರಂಭ ನಡೆಯಬೇಕಾಗಿದ್ದು, ಪರಂಪರೆಯಂತೆ ಎಸಿಸಿ ಅಧ್ಯಕ್ಷರು ಆಟಗಾರರಿಗೆ ಪದಕ ನೀಡುವುದು ವಾಡಿಕೆ.
ಆದರೆ ಭಾರತೀಯ ತಂಡಕ್ಕೆ ಪದಕ ನೀಡುವ ವೇಳೆ ಮೊಹ್ಸಿನ್ ನಖ್ವಿ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಅವರ ಬದಲು ಐಸಿಸಿ ಅಸೋಸಿಯೇಟ್ ಸದಸ್ಯರ ಅಧ್ಯಕ್ಷ ಮುಬಾಸಿರ್ ಉಸ್ಮಾನಿ ಭಾರತೀಯ ಆಟಗಾರರಿಗೆ ಪದಕ ಪ್ರದಾನ ಮಾಡಿದರು. ಬಳಿಕ ಮೊಹ್ಸಿನ್ ನಖ್ವಿ ಚಾಂಪಿಯನ್ ಪಾಕಿಸ್ತಾನ ತಂಡಕ್ಕೆ ಟ್ರೋಫಿ ನೀಡಿ ಸಮಾರಂಭ ಮುಕ್ತಾಯಗೊಳಿಸಿದರು.
ಈ ಬೆಳವಣಿಗೆಯೊಂದಿಗೆ ಭಾರತ–ಪಾಕಿಸ್ತಾನ ಕ್ರಿಕೆಟ್ ಸಂಬಂಧದಲ್ಲಿನ ಪ್ರತಿಷ್ಠೆಯ ಸಂಘರ್ಷ ಮತ್ತೊಮ್ಮೆ ಸಾರ್ವಜನಿಕವಾಗಿ ಗೋಚರಿಸಿದೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಕ್ರಿಕೆಟ್ ವಲಯದ ಗಮನ ನೆಟ್ಟಿದೆ.

