March 22, 2026
Sunday, March 22, 2026
spot_img

ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಸರಗಳ್ಳತನ ಮಾಡಿದ ಖದೀಮರು 4 ಗಂಟೆಯಲ್ಲಿ ಅಂದರ್!

ಹೊಸದಿಗಂತ ಉಡುಪಿ:

ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದು ವೃದ್ಧೆಯ ಚಿನ್ನದ ಸರ ಕಿತ್ತೊಯ್ದಿದ್ದ ಮೂವರು ಆರೋಪಿಗಳನ್ನು ಶಿರ್ವ ಮತ್ತು ಬೈಂದೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಕೃತ್ಯ ನಡೆದ ಕೇವಲ 4 ಗಂಟೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.

ಶನಿವಾರ ಬೆಳಿಗ್ಗೆ 9:30ರ ಸುಮಾರಿಗೆ ಕುರ್ಕಾಲು ಗ್ರಾಮದ ಶಂಕರಪುರ ನಿವಾಸಿ ಹೆಲೆನ್ ಡಿಸೋಜ (69) ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಮಲ್ಲಿಗೆ ಕಟ್ಟುತ್ತಿದ್ದರು. ಈ ವೇಳೆ ಹಿಂದೆ ಬಾಡಿಗೆಗೆ ಇದ್ದ ಆನಂದ ಎಂಬಾತ ತನ್ನ ಇಬ್ಬರು ಸ್ನೇಹಿತರೊಂದಿಗೆ ಅಲ್ಲಿಗೆ ಬಂದಿದ್ದಾನೆ. ಅತಿಥಿಗಳಂತೆ ಬಂದವರಿಗೆ ಹೆಲೆನ್ ಅವರು ಚಹಾ ಕುಡಿಸಿ ಉಪಚರಿಸಿದ್ದಾರೆ. “ಬಾಡಿಗೆಗೆ ರೂಮ್ ಇಲ್ಲ” ಎಂದು ಹೆಲೆನ್ ತಿಳಿಸಿದಾಗ, ಮೊಬೈಲ್ ನಂಬರ್ ಕೇಳುವ ನೆಪದಲ್ಲಿ ಆರೋಪಿಗಳು ಅವರ ಕುತ್ತಿಗೆಯಲ್ಲಿದ್ದ 3.50 ಲಕ್ಷ ರೂ. ಮೌಲ್ಯದ 28 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಅಡ್ಡ ಬಂದ ಅವರ ಅಕ್ಕ ತೆರಜಾ ಅವರನ್ನೂ ತಳ್ಳಿ ಆರೋಪಿಗಳು ಪಲ್ಸರ್ ಬೈಕ್‌ನಲ್ಲಿ ಪರಾರಿಯಾಗಿದ್ದರು.

ಘಟನೆ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ ಹಾಗೂ ತಂಡ, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಜಿಲ್ಲೆಯಾದ್ಯಂತ ಅಲರ್ಟ್ ಘೋಷಿಸಿದರು. ಕಳ್ಳರು ತಪ್ಪಿಸಿಕೊಳ್ಳದಂತೆ ಎಲ್ಲಾ ಚೆಕ್ ಪೋಸ್ಟ್‌ಗಳಿಗೆ ಮಾಹಿತಿ ರವಾನಿಸಲಾಯಿತು.

ಕಳ್ಳತನವಾಗಿ ನಾಲ್ಕೇ ಗಂಟೆಯಲ್ಲಿ ಆರೋಪಿಗಳು ಶೀರೂರು ಚೆಕ್ ಪೋಸ್ಟ್‌ನಲ್ಲಿ ಬೈಂದೂರು ಪೊಲೀಸರ ಬಲೆಗೆ ಬಿದ್ದರು.

ವಶಪಡಿಸಿಕೊಂಡ ವಸ್ತುಗಳು: ಒಂದು ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್.

ಸದ್ಯ ಆರೋಪಿಗಳು ಶಿರ್ವ ಪೊಲೀಸರ ಅತಿಥಿಯಾಗಿದ್ದು, ಪ್ರಕರಣ ದಾಖಲಾಗಿದೆ. ವೃದ್ಧೆಯ ಚಿನ್ನವನ್ನು ಕ್ಷಿಪ್ರವಾಗಿ ಪತ್ತೆ ಹಚ್ಚಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !