ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಕಪ್ಪು ಸಮುದ್ರದ ತೀರದಲ್ಲಿರುವ ಟುವಾಪ್ಸೆ ಬಂದರಿನ ಮೇಲೆ ಭಾನುವಾರ ರಾತ್ರಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಿಂದ ಭಾರೀ ಸ್ಫೋಟ ಸಂಭವಿಸಿದೆ. ಈ ಅಪ್ರತೀಕ್ಷಿತ ದಾಳಿಯಿಂದ ಬಂದರು ಪ್ರದೇಶದಾದ್ಯಂತ ಬೆಂಕಿ ಕಾಣಿಸಿಕೊಂಡಿದ್ದು, ತೈಲ ಸಂಸ್ಕರಣಾಗಾರ ಹಾಗೂ ಟರ್ಮಿನಲ್‌ಗಳಿಗೆ ತೀವ್ರ ಹಾನಿಯಾಗಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಉದ್ದೇಶ ರಷ್ಯಾದ ಮಿಲಿಟರಿ ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸುವುದಾಗಿದೆ ಎನ್ನಲಾಗಿದೆ.
ರಷ್ಯಾದ ಮಾಧ್ಯಮ ವರದಿಗಳ ಪ್ರಕಾರ, ದೇಶದ ವಾಯು ರಕ್ಷಣಾ ಪಡೆಗಳು ಸುಮಾರು 164 ಉಕ್ರೇನಿಯನ್ ಡ್ರೋನ್‌ಗಳನ್ನು ಹಾರಾಟದ ಮಧ್ಯದಲ್ಲೇ ಹೊಡೆದುರುಳಿಸಿವೆ. ಆದಾಗ್ಯೂ ಈ ಮಾಹಿತಿಯನ್ನು ಅಂತಾರಾಷ್ಟ್ರೀಯವಾಗಿ ದೃಢೀಕರಿಸಲಾಗಿಲ್ಲ. ರಷ್ಯಾ ಸರ್ಕಾರದ ಪ್ರಕಾರ, ಹೆಚ್ಚಿನ ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆದಿದ್ದರೂ ಕೆಲವು ಬಂದರು ಪ್ರದೇಶವನ್ನು ತಲುಪಿವೆ ಎಂದು ಹೇಳಿದೆ.
ಟುವಾಪ್ಸೆ ಬಂದರಿನ ರೋಸ್ನೆಫ್ಟ್ ತೈಲ ಸಂಸ್ಕರಣಾಗಾರದಲ್ಲಿ ಡ್ರೋನ್ ಅವಶೇಷಗಳು ಬಿದ್ದ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿತು. ಇದೇ ಸ್ಥಳವನ್ನು ಹಿಂದೆಯೂ ಉಕ್ರೇನಿಯನ್ ಪಡೆಗಳು ಗುರಿಯಾಗಿಸಿದ್ದವು ಎಂದು ವರದಿಗಳು ತಿಳಿಸಿವೆ. ಸ್ಥಳೀಯ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದು, ಪ್ರಸ್ತುತ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆದರೆ ಆರ್ಥಿಕ ನಷ್ಟಗಳು ದೊಡ್ಡ ಪ್ರಮಾಣದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                                    