Thursday, December 18, 2025

ಅಂಡರ್-19 ಏಷ್ಯಾ ಕಪ್‌ | ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ಅಭಿಗ್ಯಾನ್ ಕುಂಡು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕಿರಿಯ ಕ್ರಿಕೆಟ್‌ ತಂಡ ತಮ್ಮ ಅದ್ಭುತ ಪ್ರದರ್ಶನದಿಂದ ಈಗಾಗಲೇ ಸದ್ದು ಮಾಡುತ್ತಿದ್ದು, ಈಗ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಅಂಡರ್-19 ಏಷ್ಯಾ ಕಪ್ 2025ರಲ್ಲಿ ಮಲೇಷ್ಯಾ ವಿರುದ್ಧ ನಡೆದ ಪಂದ್ಯದಲ್ಲಿ 17 ವರ್ಷದ ಎಡಗೈ ಬ್ಯಾಟರ್ ಅಭಿಗ್ಯಾನ್ ಕುಂಡು ಅಪ್ರತಿಮ ಸಾಧನೆ ಮಾಡಿದ್ದಾರೆ. ಯೂತ್ ಒಡಿಐ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದ ಅವರು, ದೇಶದ ಕ್ರಿಕೆಟ್ ವಲಯದ ಗಮನ ಸೆಳೆದಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲೇ ಕೆಲವು ವಿಕೆಟ್ ಕಳೆದುಕೊಂಡರೂ, ಮಧ್ಯಕ್ರಮದಲ್ಲಿ ಕುಂಡು ತೋರಿದ ತಾಳ್ಮೆಯ ಜೊತೆಗೆ ಆಕ್ರಮಣಕಾರಿ ಆಟವೇ ಪಂದ್ಯಕ್ಕೆ ದಿಕ್ಕು ನೀಡಿತು. ಐದನೇ ಕ್ರಮಾಂಕದಲ್ಲಿ ಕ್ರಿಸ್ ಗೆ ಬಂದ ಕುಂಡು, ವೇದಾಂತ್ ತ್ರಿವೇದಿ ಜೊತೆಗೆ ದೊಡ್ಡ ಜೊತೆಯಾಟ ಕಟ್ಟಿದರು. ತ್ರಿವೇದಿ ಔಟ್ ಆದ ಬಳಿಕವೂ ಕುಂಡು ವೇಗ ಕಡಿಮೆ ಮಾಡದೆ, ಕನಿಷ್ಕ್ ಚೌಹಾನ್ ಜೊತೆಗೆ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.

44 ಎಸೆತಗಳಲ್ಲಿ ಅರ್ಧಶತಕ, 80 ಎಸೆತಗಳಲ್ಲಿ ಶತಕ ಮತ್ತು 121 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ಕುಂಡು, ಕೊನೆವರೆಗೂ ಅಜೇಯರಾಗಿ 209 ರನ್ ದಾಖಲಿಸಿದರು. 17 ಬೌಂಡರಿ ಮತ್ತು 9 ಸಿಕ್ಸರ್‌ಗಳಿಂದ ಅಲಂಕರಿಸಿದ ಈ ಇನ್ನಿಂಗ್ಸ್, ಅಂಡರ್-19 ಏಷ್ಯಾ ಕಪ್‌ನಲ್ಲೇ ಅತಿ ದೊಡ್ಡ ವೈಯಕ್ತಿಕ ಸ್ಕೋರ್ ಆಗಿದೆ. ಈ ಸಾಧನೆಯೊಂದಿಗೆ ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ ಬಳಿಕ ಭಾರತೀಯ ಯುವ ಕ್ರಿಕೆಟ್‌ಗೆ ಮತ್ತೊಂದು ಭರವಸೆಯ ತಾರೆ ಉದಯಿಸಿದ್ದಾರೆ.

error: Content is protected !!