ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಜಕೀಯ ವಲಯದಲ್ಲಿ ಈಗ ‘ಡಿನ್ನರ್ ಪಾಲಿಟಿಕ್ಸ್’ ಜೋರಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗಷ್ಟೇ ಸಚಿವರಿಗೆ ಭೋಜನಕೂಟ ಏರ್ಪಡಿಸಿದ ಬೆನ್ನಲ್ಲೇ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ರಾತ್ರಿ ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಆಯ್ದ ಸಚಿವರಿಗೆ ಡಿನ್ನರ್ ಆಯೋಜಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಕೇವಲ ಊಟಕ್ಕಷ್ಟೇ ಈ ಆಮಂತ್ರಣ ಸೀಮಿತವಾಗಿಲ್ಲ. ಸಭೆಯಲ್ಲಿ ಚರ್ಚೆಯಾಗಲಿರುವ ಪ್ರಮುಖ ಅಂಶಗಳೆಂದರೆ. ಮುಂಬರುವ ಎರಡು ಉಪಚುನಾವಣೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗಳ ಗೆಲುವಿನ ತಂತ್ರ.
ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಒಳಮೀಸಲಾತಿ ಜಾರಿ ಕುರಿತಾದ ಚರ್ಚೆ. ಹೊಸಬರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ, 16 ಪ್ರಭಾವಿ ಸಚಿವರೊಂದಿಗೆ ಸಿಎಂ ನಡೆಸುವ ಮಾತುಕತೆ ನಿರ್ಣಾಯಕವೆನಿಸಿದೆ.
ಡಿಸಿಎಂ ಡಿನ್ನರ್ ಬೆನ್ನಲ್ಲೇ ಸಿಎಂ ಈ ಸಭೆ ಕರೆದಿರುವುದು “ಪವರ್ ಗೇಮ್” ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಿರಿಯ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ, ಆಡಳಿತದ ಮೇಲಿನ ತಮ್ಮ ಹಿಡಿತವನ್ನು ಮತ್ತೊಮ್ಮೆ ಸಾಬೀತುಪಡಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ.



