ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲಿನ ದೌರ್ಜನ್ಯಗಳು ಮಿತಿಮೀರುತ್ತಿವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ದೀಪು ಚಂದ್ರದಾಸ್ ಎಂಬುವವರನ್ನು ಬರ್ಬರವಾಗಿ ಹತ್ಯೆಗೈದಿದ್ದ ದುರುಳರು, ಈಗ ರಾಜಬರಿ ಜಿಲ್ಲೆಯಲ್ಲಿ ಅಮೃತ್ ಮಂಡಲ್ (29) ಎಂಬ ಮತ್ತೊಬ್ಬ ಹಿಂದು ಯುವಕನನ್ನು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.
ಘಟನೆಯ ವಿವರ:
ಬುಧವಾರ ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ರಾಜಬರಿ ಜಿಲ್ಲೆಯ ಹೊಸಾಯಿದಂಗ ಹಳೆಯ ಮಾರುಕಟ್ಟೆ ಬಳಿ ಈ ಘಟನೆ ನಡೆದಿದೆ. ಅಮೃತ್ ಮಂಡಲ್ ಎಂಬಾತನ ಮೇಲೆ ಏಕಾಏಕಿ ಮುಗಿಬಿದ್ದ ಉದ್ರಿಕ್ತರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ತೀವ್ರ ಗಾಯಗೊಂಡಿದ್ದ ಅಮೃತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಪೊಲೀಸರ ಮಾಹಿತಿಯ ಪ್ರಕಾರ, ಕೊಲೆಯಾದ ಅಮೃತ್ ಒಬ್ಬ ಸುಲಿಗೆಕೋರನಾಗಿದ್ದ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಆದರೆ, ಈ ಹಿಂದೆ ದೀಪು ಚಂದ್ರದಾಸ್ ಎಂಬುವವರನ್ನು ಹತ್ಯೆ ಮಾಡಿದಾಗಲೂ ‘ಧರ್ಮ ನಿಂದನೆ’ಯ ಸುಳ್ಳು ಆರೋಪ ಹೊರಿಸಲಾಗಿತ್ತು. ಹಾಗಾಗಿ, ಈಗಲೂ ಅಮೃತ್ ಮೇಲಿನ ಸುಲಿಗೆಯ ಆರೋಪವು ಕೇವಲ ಕೊಲೆಯನ್ನು ಸಮರ್ಥಿಸಿಕೊಳ್ಳಲು ಹೂಡಿರುವ ತಂತ್ರವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

