ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್-ಬಾಂಗ್ಲಾದೇಶಕ್ಕೆ ಗುಂಡು–ಬಾಂಬ್ ಇಲ್ಲದಿದ್ದರೂ ಪರಿಣಾಮ ಮಾತ್ರ ಯುದ್ಧದಷ್ಟೇ ಗಂಭೀರವಾಗಿದೆ ಈ ಸಲದ ಬಜೆಟ್. ಕೇಂದ್ರ ಬಜೆಟ್ 2026ರಲ್ಲಿ ಘೋಷಿಸಲಾದ ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್’ ಯೋಜನೆ ಭಾರತದ ಜವಳಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವ ಜೊತೆಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಜವಳಿ ಉದ್ಯಮಗಳಿಗೆ ತೀವ್ರ ಸ್ಪರ್ಧಾತ್ಮಕ ಸವಾಲು ಎಸೆದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಈ ಯೋಜನೆಯ ಉದ್ದೇಶ ಖಾದಿ, ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸುವುದು ಹಾಗೂ ಗ್ರಾಮೀಣ ನೇಕಾರರು, ಕುಶಲಕರ್ಮಿಗಳನ್ನು ಜಾಗತಿಕ ಮೌಲ್ಯ ಸರಪಳಿಗೆ ಕೊಂಡೊಯ್ಯುವುದಾಗಿದೆ. ಇದು ಕೇವಲ ಕಲ್ಯಾಣ ಯೋಜನೆಯಲ್ಲ, ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ತಂತ್ರಾತ್ಮಕ ಹೆಜ್ಜೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಈ ಯೋಜನೆಯ ಪರಿಣಾಮವಾಗಿ, ಇದುವರೆಗೆ ‘ಅಲ್ಪ ಅಭಿವೃದ್ಧಿ ಹೊಂದಿದ ದೇಶ’ ಸ್ಥಾನಮಾನದಿಂದ ಶೂನ್ಯ ಸುಂಕ ಲಾಭ ಪಡೆದಿದ್ದ ಬಾಂಗ್ಲಾದೇಶಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. 2026ರಲ್ಲಿ ಬಾಂಗ್ಲಾದೇಶ LDC ಪಟ್ಟಿಯಿಂದ ಹೊರಬರುವುದರಿಂದ ಅದರ ವಾಣಿಜ್ಯ ರಿಯಾಯಿತಿಗಳು ಕೊನೆಗೊಳ್ಳಲಿವೆ. ಜೊತೆಗೆ, ಬಾಂಗ್ಲಾದೇಶ ತನ್ನ ಜವಳಿ ಉದ್ಯಮಕ್ಕೆ ಅಗತ್ಯವಾದ ಬಹುಪಾಲು ನೂಲನ್ನು ಭಾರತದಿಂದಲೇ ಆಮದು ಮಾಡಿಕೊಳ್ಳುತ್ತಿರುವುದರಿಂದ ವೆಚ್ಚದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಇಂಧನ ಬಿಕ್ಕಟ್ಟು ಮತ್ತು ಆರ್ಥಿಕ ಅಸ್ಥಿರತೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೂ ಭಾರತದ ಕ್ಲಸ್ಟರ್ ಆಧಾರಿತ ಜವಳಿ ವಿಸ್ತರಣೆ ಬೆಲೆ ಸ್ಪರ್ಧೆಯಲ್ಲಿ ಹಿನ್ನಡೆ ಉಂಟುಮಾಡಬಹುದು. ಬಜೆಟ್‌ನಲ್ಲಿ ಜವಳಿ ಸಚಿವಾಲಯಕ್ಕೆ 5,272 ಕೋಟಿ ಅನುದಾನ ನೀಡಲಾಗಿದ್ದು, ಹತ್ತಿ ಉತ್ಪಾದನೆ ಹೆಚ್ಚಿಸಲು ಐದು ವರ್ಷಗಳ ‘ಕಾಟನ್ ಮಿಷನ್’ಗೂ ಚಾಲನೆ ನೀಡಲಾಗಿದೆ. ಇದರಿಂದ ಭಾರತದ ಸಂಪೂರ್ಣ ಜವಳಿ ಸರಪಳಿ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ನಿರೀಕ್ಷಿಸಲಾಗಿದೆ.



