ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ತಮ್ಮ ದಾಖಲೆಯ ಸತತ 9ನೇ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಎಂದಿನಂತೆ ತಮ್ಮ ಸಾಂಪ್ರದಾಯಿಕ ಶೈಲಿಯ ಕೆಂಪು ಬಣ್ಣದ ವಸ್ತ್ರದಿಂದ ಸುತ್ತಲ್ಪಟ್ಟ ಮತ್ತು ಸುವರ್ಣ ಬಣ್ಣದ ರಾಷ್ಟ್ರಲಾಂಛನವಿರುವ ಡಿಜಿಟಲ್ ‘ಬಹಿ-ಖಾತಾ’ ಹಿಡಿದು ಕರ್ತವ್ಯ ಭವನದಿಂದ ರಾಷ್ಟ್ರಪತಿ ಭವನಕ್ಕೆ ತೆರಳಿದರು.
ಸರಿಯಾಗಿ ಇಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚಗಳ ಸಮಗ್ರ ವರದಿಯನ್ನು ದೇಶದ ಮುಂದೆ ಮಂಡಿಸಲಿದ್ದಾರೆ.
ಸಚಿವರೊಂದಿಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಅಧ್ಯಕ್ಷ ರವಿ ಅಗರ್ವಾಲ್ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಆರ್ಥಿಕ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ 2003 ರ ಅಡಿಯಲ್ಲಿ, ‘ಮಧ್ಯಮ ಅವಧಿಯ ಹಣಕಾಸು ನೀತಿ’ ಮತ್ತು ‘ಮ್ಯಾಕ್ರೋ-ಎಕನಾಮಿಕ್ ಫ್ರೇಮ್‌ವರ್ಕ್’ ಎಂಬ ಎರಡು ಪ್ರಮುಖ ಹೇಳಿಕೆಗಳನ್ನು ಸಚಿವರು ಸದನದಲ್ಲಿ ಮಂಡಿಸಲಿದ್ದಾರೆ.
ಸರ್ಕಾರದ ಹಣಕಾಸಿನ ಪ್ರಸ್ತಾವನೆಗಳಿಗೆ ಕಾನೂನುಬದ್ಧ ರೂಪ ನೀಡಲು ಹಣಕಾಸು ಮಸೂದೆ-2026 ಅನ್ನು ಸಚಿವರು ಮಂಡಿಸಿ, ಪರಿಚಯಿಸಲಿದ್ದಾರೆ.



