Sunday, October 12, 2025

MBBS ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ 75,000 MBBS (ಯುಜಿ) ಸೀಟುಗಳನ್ನು ಹೊಂದುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಗುರುವಾರ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ‘FICCI HEAL 2025’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ 75,000 ಹೆಚ್ಚುವರಿ ಯುಜಿ ಸೀಟುಗಳು ಸೇರ್ಪಡೆ ಮಾಡಲಿದ್ದೇವೆ. ಈಗಾಗಲೇ 76,000 ಸ್ನಾತಕೋತ್ತರ (PG) ಸೀಟುಗಳಿವೆ. ಈ ಹೆಚ್ಚಳದೊಂದಿಗೆ ಗುಣಮಟ್ಟದಲ್ಲೂ ರಾಜಿಯಾಗದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಏಕೆಂದರೆ ಅದು ಈಗಿನ ಅಗತ್ಯವಾಗಿದೆ ಎಂದರು.

ಎಂಬಿಬಿಎಸ್ ಸೀಟುಗಳ ಸಂಖ್ಯೆ ಮತ್ತು ವೈದ್ಯಕೀಯ ಮೂಲಸೌಕರ್ಯದ ಕುರಿತು ಮಾತನಾಡಿದ ನಡ್ಡಾ, ವಿಕಸಿತ್​ ಭಾರತದ ದೃಷ್ಟಿಕೋನವನ್ನು ನಾವು ಪೂರೈಸಲು ಬಯಸಿದರೆ, ಮುಂಬರುವ ವರ್ಷಗಳಲ್ಲಿ ನಮಗೆ 20 ಲಕ್ಷ ಹಾಸಿಗೆಗಳು ಮತ್ತು ಪ್ರತಿ 1000 ರೋಗಿಗಳಿಗೆ ಎರಡು ಹಾಸಿಗೆಗಳು ಬೇಕಾಗುತ್ತದೆ ಎಂದು ಹೇಳಿದರು.

ಮೊದಲು ಕೇವಲ 387 ವೈದ್ಯಕೀಯ ಕಾಲೇಜುಗಳಿದ್ದವು ಮತ್ತು ಈಗ ನಮ್ಮಲ್ಲಿ 810 ವೈದ್ಯಕೀಯ ಕಾಲೇಜುಗಳಿದ್ದು, ಯುಜಿ ಮಟ್ಟದಲ್ಲಿ ಸೀಟುಗಳು 51,000 ರಿಂದ 1,25,000 ಕ್ಕೆ ಹೆಚ್ಚಿವೆ ಎಂದು ಅವರು ಮಾಹಿತಿ ನೀಡಿದರು.

ಇಂದು ಆಯುಷ್ಮಾನ್ ಭಾರತ್ ವಿಶ್ವದ ಅತಿದೊಡ್ಡ ಸಾರ್ವತ್ರಿಕ ಆರೋಗ್ಯ ವಿಮಾ ಕಾರ್ಯಕ್ರಮವಾಗಿದೆ. ಸುಮಾರು 62 ಕೋಟಿ ನಾಗರಿಕರು ಅಥವಾ ಭಾರತೀಯ ಜನಸಂಖ್ಯೆಯ ಶೇಕಡಾ 40 ಕ್ಕಿಂತ ಹೆಚ್ಚು ಜನರು 5 ಲಕ್ಷ ರೂ. ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿದ್ದಾರೆ. 70 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು ಸಾಯುವವರೆಗೂ ಆಯುಷ್ಮಾನ್ ಭಾರತ ವಿಮಾ ರಕ್ಷಣೆಗೆ ಅರ್ಹರಾಗಿರುತ್ತಾರೆ ಎಂದು ನಡ್ಡಾ ಹೇಳಿದರು.

ಪ್ರಸ್ತುತ ಜನೌಷಧ ಕೇಂದ್ರ 16,000 ಮಳಿಗೆಗಳಿಂದ 25,000 ಮಳಿಗೆಗಳಿಗೆ ಹೆಚ್ಚಿಸಲು ಸರ್ಕಾರ ಯೋಜಿಸುತ್ತಿದೆ. ಕಳೆದ ವರ್ಷಗಳಲ್ಲಿ ಜೇಬಿನಿಂದ ಖರ್ಚು ಮಾಡುವ ವೆಚ್ಚವು ಶೇಕಡಾ 62.6 ರಿಂದ ಶೇಕಡಾ 39.4 ಕ್ಕೆ ಇಳಿದಿದೆ ಮತ್ತು ಆಯುಷ್ಮಾನ್ ಭಾರತ್ ಇದರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು.

2017 ರ ರಾಷ್ಟ್ರೀಯ ಆರೋಗ್ಯ ನೀತಿಯು ಆರೋಗ್ಯ ಕ್ಷೇತ್ರಕ್ಕಾಗಿ ನಾವು ಜಿಡಿಪಿಯ ಶೇಕಡಾ 2.5 ರಷ್ಟು ಖರ್ಚು ಮಾಡುತ್ತೇವೆ ಎಂದು ಹೇಳುತ್ತದೆ. ನಾವು ಈಗ ಶೇಕಡಾ 1.8 ರಷ್ಟು ಖರ್ಚು ಮಾಡುತ್ತಿದ್ದೇವೆ. ಆದರೆ, ರಾಜ್ಯಗಳು ಈ ವಲಯದಲ್ಲಿ ತಮ್ಮ ಖರ್ಚನ್ನು ಹೆಚ್ಚಿಸಬೇಕು. ರಾಜ್ಯ ಮಟ್ಟದಲ್ಲಿ ಸಾಕಷ್ಟು ಹಣವಿದೆ ಮತ್ತು ಸಂಪೂರ್ಣ ಬಳಕೆಗಾಗಿ ಈ ನಿಧಿಗಳ ಅನುಷ್ಠಾನವನ್ನು ನಾವು ಬಲಪಡಿಸಬೇಕಾಗಿದೆ ಎಂದು ಹೇಳಿದೆ.

error: Content is protected !!