ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್.ಡಿ.ದೇವೇಗೌಡರು ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಜೆಡಿ(ಎಸ್) ಪಕ್ಷದಲ್ಲಿ ಬೆಳೆಸಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಮಾತಿಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಸರಣಿ ಟ್ಟೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು,ಸಿದ್ದರಾಮಯ್ಯನವರೇ, ನಾನು ಸುತ್ತಿಬಳಸಿ ಮಾತನಾಡಲ್ಲ. ನೇರವಾಗಿ ವಿಷಯಕ್ಕೇ ಬರುತ್ತೇನೆ. ಸಿದ್ದರಾಮಯ್ಯನವರು ಕುರ್ಚಿಗಾಗಿ ಜಾತಿ ಎಳೆದು ತಂದಿದ್ದಾರೆ ಎಂದು ನಾನು ತಮಾಷೆಗೆ ಹೇಳಿದ್ದಲ್ಲ, ಸೀರಿಯಸ್ಸಾಗೇ ಹೇಳಿದ್ದೇನೆ. ತಮಾಷೆಗೆ ಹೇಳಿದ್ದೇನೆ ಎಂದಿಟ್ಟುಕೊಳ್ಳಿ, ನೀವು ಇಷ್ಟುದ್ದ ಉತ್ತರ ಬರೆಯುವ ಅಗತ್ಯವಿರಲಿಲ್ಲ. ಈ ಬಗ್ಗೆ ನೀವು ಸೀರಿಯಸ್ ಆಗಿದ್ದೀರಿ ಎಂಬುದನ್ನು ಬಲ್ಲೆ. ಹಾಗಿದ್ದರೂ ನನ್ನ ಹೇಳಿಕೆಯನ್ನು ನೀವು ತಮಾಷೆಯಾಗಿಯೇ ಸ್ವೀಕರಿಸಿ, ಅಭ್ಯಂತರವಿಲ್ಲ ಎಂದಿದ್ದಾರೆ.
ನೀವು ಪಟ್ಟಿ ಮಾಡಿರುವ ಒಕ್ಕಲಿಗ ನಾಯಕರ ಹೆಸರುಗಳನ್ನು ಓದಿದೆ. ಪಾಪ.. ನೀವು ಅವರ ಹೆಸರುಗಳನ್ನ ಉಲ್ಲೇಖಿಸಿ ಅವರನ್ನೂ ಅಪಹಾಸ್ಯ ಮಾಡಿದ್ದೀರಿ. ನೀವೂ ಅಪಹಾಸ್ಯಕ್ಕೆ ತುತ್ತಾಗಿದ್ದಲ್ಲದೆ, ನಗೆಪಾಟಲಿಗೀಡಾಗಿದ್ದೀರಿ. ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಆ 13 ಜನರ ಶೆಲ್ಟರ್ ಪಡೆದಿದ್ದೀರಿ, ಸರಿ. ಹಾಗಿದ್ದರೆ ಅವರೆಲ್ಲರೂ ದೇವೇಗೌಡರಿಂದ ಅಧಿಕಾರ ಅನುಭವಿಸಲೇ ಇಲ್ಲವೇ? ಆಗ ಅವರೆಲ್ಲರೂ ಕೂತಿದ್ದ ಅಧಿಕಾರ ಸ್ಥಾನಗಳಲ್ಲಿ ದೇವೇಗೌಡರೇ ಕೂತಿದ್ದರಾ? ಅವರೆಲ್ಲರೂ ನಿಮ್ಮಂತೆಯೇ ದೇವೇಗೌಡರ ಶ್ರಮ, ತ್ಯಾಗದಿಂದ ಅಧಿಕಾರ ಉಂಡು, ಪೊಗದಸ್ತಾಗಿ ಬೆಳೆದು ಬೇಲಿ ಹಾರಿದವರು! ನೀವು ಹೇಳಿದಂತೆ ಕುಟುಂಬವೇ ಮಿಗಿಲು ಎಂದು ಗೌಡರು ಭಾವಿಸಿದ್ದಿದ್ದರೆ ಈ ಪಟ್ಟಿಯಲ್ಲಿನ ಒಬ್ಬರೂ ಶಾಸಕ, ಮಂತ್ರಿ, ಎಂಪಿ ಆಗುತ್ತಲೇ ಇರಲಿಲ್ಲ.. ನಿಮ್ಮನ್ನೂ ಸೇರಿಸಿ! ಏನಂತೀರಿ? ನೀವೆಲ್ಲರೂ ನೆರಳು ಕೊಟ್ಟ ವೃಕ್ಷಕ್ಕೆ ನಿರ್ದಯದಿಂದ ಕೊಡಲಿ ಹಾಕಿದಿರಿ. ಉಂಡು ಹೋದರಿ, ಕೊಂಡು ಹೋದರಿ ಎಂದು ಟೀಕಿಸಿದರು.
ಮ್ಮ ಸ್ವಾರ್ಥಕ್ಕೆ ಜಾತಿ ಎಳೆದು ತಂದಂತೆ ಹಿರಿಯರಾದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ. ಕೃಷ್ಣ ಅವರನ್ನು ಏಕೆ ಎಳೆದು ತರುತ್ತೀರಿ? ಎಸ್.ಎಂ.ಕೃಷ್ಣ ಅವರ ಹೆಸರೇಳುವ ಸಾಸಿವೆ ಕಾಳಷ್ಟು ಯೋಗ್ಯತೆ, ನೈತಿಕತೆ ನಿಮಗಿದೆಯೇ? ಹಿ ಈಸ್ ಅನ್ ಪಾಲಿಷ್ಡ್ ಡೈಮಂಡ್ ಎಂದು ಸೋನಿಯಾ ಗಾಂಧಿ ಅವರ ಮುಂದೆ ಹೇಳಿ ನೀವು ಕಾಂಗ್ರೆಸ್ ಮೆಟ್ಟಿಲತ್ತಲು ಕಾರಣರಾದ ಎಸ್.ಎಂ.ಕೃಷ್ಣರನ್ನು ಎಷ್ಟು ಕ್ರೂರವಾಗಿ ವಂಚಿಸಿದಿರೆನ್ನುವುದು ಜಗತ್ತು ಬಲ್ಲ ಸತ್ಯ. ರಾಜಕೀಯದ ಕಡೆಗಾಲದಲ್ಲಿ ಅವರನ್ನು ನೀವೆಷ್ಟು ತುಚ್ಛವಾಗಿ ನಡೆಸಿಕೊಂಡಿರಿ ಎನ್ನುವುದನ್ನು ಜನ ಮರೆತಿಲ್ಲ. ಅನ್ ಪಾಲಿಷ್ಡ್ ಡೈಮಂಡ್ ಕೃಷ್ಣರಿಗೆ ಚೂರಿ ಆಗಿದ್ದು ಎಲ್ಲರೂ ಬಲ್ಲರು ಎಂದು ತಿರುಗೇಟು ನೀಡಿದರು.
ಕುರುಬ ಸಮಾಜದವನು, ನನ್ನನ್ನ ಅಸೂಯೆಯಿಂದ ತೆಗೆಯೋಕೆ ಹೋಗ್ತಾ ಇದ್ದಾರೆ ಅಂತಾರೆ. ಉತ್ತಮ ಬಜೆಟ್ ಕೊಟ್ಟವನು ನಾನು ಅಂತಾರೆ. ಸಿದ್ದರಾಮಯ್ಯ ಬೆಳೆಯೋಕೆ ಕುರುಬ ಸಮಾಜ ಮಾತ್ರವಲ್ಲ ಎಲ್ಲಾ ಸಮುದಾಯ ಬೆಂಬಲ ಕೊಟ್ಟಿದೆ. ಇವತ್ತು ಜಾತಿ ಹೆಸರಿನ ಸಂಕುಚಿತ ಮನೋಭಾದಲ್ಲಿ ಸಾಮಾಜಿಕ ನ್ಯಾಯ ಜಾರಿಗೆ ತರೋದು, ಎಲ್ಲಾ ಸಮಾಜದ ಬಗ್ಗೆ ಚರ್ಚೆ ಮಾಡ್ತಾರೆ. ಅಂಬೇಡ್ಕರ್, ಬಸವಣ್ಣ ಎಲ್ಲರ ಹೆಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಈಗ ಜ್ಞಾನೋದಯವಾಗಿದೆ. ಅವರ ನಡವಳಿಕೆ ಅವರನ್ನ ಬೆಳೆಸಿದವರು ಊಹೆ ಮಾಡಿರಲಿಲ್ಲ ಎಂದಿದ್ದಾರೆ.
ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವ ಕಾಂಗ್ರೆಸ್ ಉದಾರತೆಯನ್ನು ನಾನು ಸ್ವಾಗತಿಸುವೆ. ಈ ಉದಾರತೆ ನಿಮಗೂ ಬೇಕಲ್ಲವೇ? ಈಗ ನೀವು ಉದಾರತೆ ತೋರಬೇಕು. ಎರಡನೇ ಅವಧಿಗೆ ನೀವು ಸಿಎಂ ಆಗುವ ಮುನ್ನ ಅಗ್ರಿಮೆಂಟ್ ಆಗಿತ್ತಲ್ಲಾ, ಅದನ್ನು ಬಹಿರಂಗವಾಗಿ ಹೇಳುವ ಉದಾರತೆ ತೋರಿ. ದಿಲ್ಲಿಯಲ್ಲಿ ನಿಮ್ಮಿಬ್ಬರ ನಡುವೆ ಆಗಿದ್ದ ಆ ಅಗ್ರಿಮೆಂಟ್ʼಗೆ ಸಾಕ್ಷಿ ಆಗಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜಿವಾಲಾಗೆ ನಿಮ್ಮ ಸಾಮಾಜಿಕ ನ್ಯಾಯ, ಒಕ್ಕಲಿಗ ಪ್ರೀತಿಯ ಪರಾಕಾಷ್ಠೆ ಈಗೀಗ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಅವರೆಲ್ಲರ ಮಾನಸಿಕ ಸ್ವಾಸ್ಥ್ಯ ಸರಿ ಇದೆ ಎಂದು ನಾನಾದರೂ ನಂಬಿದ್ದೇನೆ ಎಂದು ಟೀಕಿಸಿದರು.



