ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
ಭಾರತ ವಿಶ್ವದ ಎರಡನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಮಾರುಕಟ್ಟೆಯಾಗಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ದೆಹಲಿಯಲ್ಲಿ ಮಂಗಳವಾರ (ಅ. 28) ನಡೆದ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಸಭೆಯ 8ನೇ ಅಧಿವೇಶನ ಉದ್ದೇಶಿಸಿ ಮಾತನಾಡಿ, ನವೀಕರಿಸಬಹುದಾದ ಇಂಧನ ಗುರಿ ಸಾಧನೆಯಲ್ಲಿ ಜಿ20 ರಾಷ್ಟ್ರಗಳ ಪೈಕಿ ಭಾರತ ಏಕೈಕ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲೇ ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂದು ಹೇಳಿದರು.
ಹವಾಮಾನ ಬದಲಾವಣೆ ತಗ್ಗಿಸುವ ಜಾಗತಿಕ ಪ್ರಯತ್ನಗಳಲ್ಲಿ ಭಾರತ ನಿರಂತರವಾಗಿ ಮುಂಚೂಣಿಯಲ್ಲಿದೆ. ಹೀಗಾಗಿ ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ ಭಾರತವನ್ನು ಇಂಧನ ಪರಿವರ್ತನಾ ಶಕ್ತಿ ಕೇಂದ್ರವೆಂದು ಕರೆದಿದೆ. ಮತ್ತು ಹವಾಮಾನ ಬದಲಾವಣೆ ಕಾರ್ಯಕ್ಷಮತೆಯ ಸೂಚ್ಯಂಕದಲ್ಲಿ ಭಾರತ ಉನ್ನತ ಸಾಧನೆ ತೋರುತ್ತಿದೆ ಎಂದು ಪ್ರತಿಪಾದಿಸಿದರು.
ಕಳೆದ 5 ವರ್ಷಗಳಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. 257 GW ಸಾಮರ್ಥ್ಯದೊಂದಿಗೆ ಭಾರತ 4ನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು, ಭಾರತದ ಸೌರ ಸಾಮರ್ಥ್ಯ 2014ರಲ್ಲಿನ 2.8 GWನಿಂದ ಇಂದು 128 GWಗೆ ಏರಿದೆ ಎಂದು ಜೋಶಿ ಸಂತಸ ಹಂಚಿಕೊಂಡರು.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ನೇತೃತ್ವದಲ್ಲಿ ಭಾರತ ಪಳೆಯುಳಿಕೆಯೇತರ ಇಂಧನದಲ್ಲಿ ಐದು ವರ್ಷ ಮೊದಲೇ ಶೇ.50ರಷ್ಟು ಗುರಿ ಸಾಧಿಸಿದೆ. ಮೋದಿ ಅವರು GST ಕಡಿತಗೊಳಿಸಿದ್ದರಿಂದ ಸೌರಶಕ್ತಿಯಾಗಿರಲಿ, ಬ್ಯಾಟರಿಯಾಗಿರಲಿ ಮತ್ತು ಹಸಿರು ಅಮೋನಿಯಾ ಆಗಿರಲಿ ಜಾಗತಿಕವಾಗಿ ಅತ್ಯಂತ ಕಡಿಮೆ ದರಗಳಲ್ಲಿ ಲಭ್ಯವಾಗುತ್ತಿದೆ. ಈ ಮೂಲಕ ಜಗತ್ತಿಗೆ ಶುದ್ಧ ಇಂಧನ ಕೈಗೆಟುಕುವಂತೆ ಮಾಡುವಲ್ಲಿ ಭಾರತ ದಿಟ್ಟ ಹೆಜ್ಜೆಯಿರಿಸಿದೆ ಎಂದು ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.
ಜಾಗತಿಕ ಸೌರಶಕ್ತಿಯು 1,600 GW ಮೀರಿದೆ. ಆದರೆ, ಒಟ್ಟು ನವೀಕರಿಸಬಹುದಾದ ಇಂದನ ಉತ್ಪಾದನೆಯಲ್ಲಿ ಸುಮಾರು 40 ಪ್ರತಿಶತದಷ್ಟು ಪಾಲನ್ನು ಹೊಂದಿದೆ. ಆದರೂ ಉಪ-ಸಹಾರನ್ ಆಫ್ರಿಕಾ ಮತ್ತು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ಇನ್ನೂ ವಿದ್ಯುತ್ ಇಲ್ಲದೆ ಬದುಕುತ್ತಿದ್ದಾರೆ. ಇದನ್ನು ನಿವಾರಿಸಲು ಸಾಮೂಹಿಕ ಪ್ರಯತ್ನ ಮತ್ತು ಸಮಾನ ಹಣಕಾಸು ಅಗತ್ಯವಿದೆ ಎಂದು ಜೋಶಿ ಅಭಿಪ್ರಾಯಿಸಿದರು.

                                    