ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ‘ಭಾರತ ಲಕ್ಷ್ಮೀ’ ಬಿರುದು ಪ್ರದಾನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮನುಷ್ಯ ಸೇವೆಯೇ ದೇಶ ಸೇವೆ, ದೇಶ ಸೇವೆಯೇ ಭಗವಂತನ ಸೇವೆಯಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ನೂತನ ಯಾಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಶ್ರೀ ಕೃಷ್ಣನ ಸಂದೇಶಗಳನ್ನು ವಿಶ್ವಕ್ಕೇ ಹರಡುವುದರಲ್ಲಿ ಪುತ್ತಿಗೆ ಮಠದ ಕೊಡುಗೆ ಅನನ್ಯ. ಪ್ರತಿದಿನ ಜನರಿಂದ ಭಗವದ್ಗೀತೆ ಬರೆಯಿಸುವುದು ಒಂದು ಮಹಾಯಜ್ಞದಂತೆ ನಡೆಯುತ್ತಿದೆ. ಒಂದು ಕೋಟಿ ಭಗವದ್ಗೀತೆಯ ಬರಹಗಳ ಸಂಗ್ರಹ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದರು.

ಭಾರತ ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ, ಅವುಗಳ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಂತರು ಪ್ರಾರ್ಥನೆ ಮೂಲಕ ಬೆಂಬಲ ನೀಡಬೇಕು ಎಂದು ಶ್ರೀಗಳಲ್ಲಿ ಭಿನ್ನವಿಸಿದರು. ದೇಶದ ಮೇಲೆ ಯುವಜನತೆ ಭಾರಿ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಅವರಿಗಾಗಿ ದೇಶವನ್ನು ಸಮೃದ್ಧಗೊಳಿಸಬೇಕಾಗಿದೆ. ಭಾರತವನ್ನು ನಾವು ದೇವಿ, ಮಾತೆ ಎಂದು ಪೂಜಿಸುತ್ತೇವೆ. ಅಂತಹ ಭಾರತ ಎಲ್ಲರ ಹೃದಯದಲ್ಲಿ ಸ್ಥಾಪನೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ೨೦೦೫ರಲ್ಲಿ ಕೃಷ್ಣಮಠಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದೆ. ಇದರಿಂದ ನನ್ನ ಜೀವನದಲ್ಲಿ ಹಿತವಾದ ದಿನಗಳು ಬಂದಿವೆ. ನಂತರವೂ ನನ್ನ ಕುಟುಂಬಸ್ಥರು ನಿರಂತರವಾಗಿ ಕೃಷ್ಣಮಠದ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಭಾವುಕಪರಾದರು.

ಜನರಿಗೆ ನಿತ್ಯ ಅನ್ನದಾಸೋಹ ನಡೆಸುವ ಮೂಲಕ ಅನ್ನಬ್ರಹ್ಮನ ಸೇವೆ ನಡೆಯುತ್ತಿದೆ. ಒಂದು ದಿನವೂ ಬಿಡದೆ ಕೃಷ್ಣ ಭೋಜನಶಾಲೆಯಲ್ಲಿ ದಾಸೋಹ ನಡೆಯುತ್ತಿರುವುದು ಭಕ್ತರಿಗೆ ಆಶೀರ್ವಾದ ಎಂದರು.

ಭಾರತ ಲಕ್ಷ್ಮೀ’ ಬಿರುದು
ಇದೇ ವೇಳೆ ನಿರ್ಮಲಾ ಸೀತಾರಾಮನ್ ಅವರಿಗೆ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ‘ಭಾರತ ಲಕ್ಷ್ಮೀ’ ಬಿರುದು ನೀಡಿ ಸನ್ಮಾನಿಸಿದರು. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಮತ್ತು ಪುತ್ತಿಗೆ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥರು ಕೂಡ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪರ್ಯಾಯ ಶ್ರೀಗಳು ಇನ್ಫೋಸಿಸ್‌ನ ಸುಧಾ ನಾರಾಯಣಮೂರ್ತಿ, ಚೆನ್ನೈನ ಉದ್ಯಮಿ ರವಿ ಸ್ಯಾಮ್, ಹೈಕೋರ್ಚಿನ ನಿವೃತ್ತ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.

ಜನರನ್ನು ಒಗ್ಗೂಡಿಸುವುದೇ ಧರ್ಮ ರಕ್ಷಣೆ
ಇನ್ಫೋಸೀಸ್ ಸುಧಾಮೂರ್ತಿ ಮಾತನಾಡಿ, ಎಲ್ಲಾ ಜನರನ್ನು ಒಗ್ಗೂಡಿಸುವುದೇ ನಿಜವಾದ ಧರ್ಮದ ರಕ್ಷಣೆ. ಪುತ್ತಿಗೆ ಶ್ರೀಗಳು ಭಾರತದಲ್ಲಿ ಮಾತ್ರವಲ್ಲ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲಿಯೂ ಮಠಗಳನ್ನು ಸ್ಥಾಪಿಸಿ ಅಲ್ಲಿನ ಭಕ್ತರನ್ನು ಒಗ್ಗೂಡಿಸಿ ಧರ್ಮ ಪ್ರಸಾರ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ ಪಾಲ್ ಸುವರ್ಣ, ನಿವೃತ್ತ ಮುಖ್ಯ ನಾಯಾಧೀಶ ದಿನೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.ವಿದ್ವಾನ್ ಗೋಪಾಲಾಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು.

ರುಕ್ಮಿಣಿಯನ್ನೇ ಕರೆಸಿಕೊಂಡಿದ್ದಾನೆ
ಪರ್ಯಾಯ ಶ್ರೀಗಳು ಮಾತನಾಡಿ, ನಿರ್ಮಲಾ ಅವರ ಮೂಲ ಹೆಸರು ರುಕ್ಮಿಣಿ ಆದ್ದರಿಂದ ರುಕ್ಮಿಣಿಯಿಂದ ಮತ್ತೆ ಕೃಷ್ಣನ ಪೂಜೆ ದ್ವಾರಕೆಯಲ್ಲಿ ರುಕ್ಮಣಿಯಿಂದ ಪೂಜಿಸಲ್ಪಟ್ಟಿದ್ದ ಉಡುಪಿ ಕೃಷ್ಣ. ನಿರ್ಮಲಾ ಸೀತಾರಾಮನ್ ಅವರ ಮೂಲಹೆಸರು ರುಕ್ಮಿಣಿ, ಇಂದು ಕೃಷ್ಣ ಮತ್ತೆ ರುಕ್ಮಿಣಿ ಅವರನ್ನು ಉಡುಪಿಗೆ ಕರೆಸಿ ಪೂಜೆ ಪಡೆದುಕೊಂಡಿದ್ದಾನೆ ಎಂದರು. ೮ ಬಾರಿ ಕೇಂದ್ರ ಬಜೆಟನ್ನು ಮಂಡಿಸಿದ ನಿರ್ಮಲಾ ಸೀತರಾಮನ್, ದೇಶದ ಭಾಗ್ಯಲಕ್ಷ್ಮೀ. ಅವರು ಹಣಕಾಸು ಸಚಿವೆಯಾಗಿರುವಾಗಲೇ ದೇಶ ವಿಶ್ವಕ್ಕೆ ನಂ.೧ ಆರ್ಥಿಕ ಶಕ್ತಿಯಾಗಲಿ ಎಂದು ಪ್ರಾರ್ಥಿಸಿದರು.

ಮಾದರಿಯಾದ ಸರಳತೆ
ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸುಧಾಮೂರ್ತಿ ಅವರು ಚಂದ್ರ ಶಾಲೆಯಲ್ಲಿ ಕುಳಿತು ದೇವರ ಸೇವೆಗೆ ಹೂವು ಕಟ್ಟಿದರು. ಸುಧಾ ಮೂರ್ತಿ ಸ್ವತಃ ಹೂಮಾಲೆ ತಯಾರಿಸಿ ಕೃಷ್ಣನಿಗೆ ಅರ್ಪಿಸಿದರು. ನಿರ್ಮಲಾ ಸೀತಾರಾಮನ್ ಅವರು ಸಾಮಾನ್ಯ ಗೃಹಿಣಿಯರಂತೆ ದೇವರ ನೈವೇದ್ಯದ ಪಾತ್ರೆಗಳನ್ನು ತೊಳೆದು ಸ್ವಚ್ಛಗೊಳಿಸಿದರು. ಬಳಿಕ ಅನ್ನಬ್ರಹ್ಮನ ಸನ್ನಿಧಿಯಲ್ಲಿ ಆಹಾರ ತಯಾರಿಯಲ್ಲೂ ಭಾಗವಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!