Wednesday, November 5, 2025

TIME 100 ಹವಾಮಾನ ಜಗತ್ತಿನ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಅವರೀಗ ವಿಶ್ವದ ಪ್ರಮುಖ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ಜಗತ್ತಿನಲ್ಲಿ ಹವಾಮಾನ ಬದಲಾವಣೆ ತಡೆದು ಸುಸ್ಥಿರತೆ ಕಾಪಾಡುತ್ತಿರುವವರ ಕುರಿತು ಸಿದ್ಧಪಡಿಸಿದ “TIME 100 climate most powerfull leader” ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ ಸಚಿವ ಪ್ರಲ್ಹಾದ್‌ ಜೋಶಿ.

ಪ್ರಲ್ಹಾದ್‌ ಜೋಶಿ ಇದೀಗ ಈ ವರ್ಷದ “TIME 100 CLIMATE” ಪಟ್ಟಿಯಲ್ಲಿ ಪ್ರಭಾವಿ ನಾಯಕನ ಸ್ಥಾನ ಪಡೆದ “ಮೊದಲ ಭಾರತೀಯ ರಾಜಕಾರಣಿ” ಎಂಬ ಹೊಸ ದಾಖಲೆ ಸಹ ಬರೆದು ವಿಶ್ವದಾದ್ಯಂತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.‌

ಪ್ರತಿಕೂಲ ಪರಿಸ್ಥಿತಿಯಲ್ಲಿ ಜಗತ್ತಿನ ಹವಾಮಾನ ಸುಸ್ಥಿರತೆಗಾಗಿ ಸಚಿವ ಪ್ರಲ್ಹಾದ್‌ ಜೋಶಿ ಅವರ ಸಾರಥ್ಯದಲ್ಲಿ ಸೌರಶಕ್ತಿ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಭಾರತ ದಿಟ್ಟ ಹೆಜ್ಜೆಯಿರಿಸಿದೆ. ಇದಕ್ಕಾಗಿ ನೂರಾರು ರಾಷ್ಟ್ರಗಳೂ ಭಾರತದೊಂದಿಗೆ ಕೈ ಜೋಡಿಸಿವೆ. ದೆಹಲಿಯ ಭಾರತ್ ಮಂಟಪದಲ್ಲಿ ಮೊನ್ನೆಯಷ್ಟೇ 125ಕ್ಕೂ ಹೆಚ್ಚು ರಾಷ್ಟ್ರಗಳನ್ನು ಒಟ್ಟುಗೂಡಿಸಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 8ನೇ ಅಧಿವೇಶನವೇ ಇದಕ್ಕೆ ಸಾಕ್ಷಿ.

2024ರಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಹೊಣೆ ಹೊತ್ತ ಜೋಶಿ ಅವರು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಪಿಎಂ ಕುಸುಮ್, ಸೂರ್ಯಘರ್ ಸೇರಿದಂತೆ ಭಾರತದ ಹಸಿರು ಇಂಧನ ಪರಿವರ್ತನೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾರೆ. 2030ರ ವೇಳೆಗೆ 500 ಗಿಗಾವಾಟ್ ಪಳೆಯುಳಿಕೇಯೇತರ ಇಂಧನ ಸಾಮರ್ಥ್ಯ ತಲುಪುವ ಭಾರತದ ಗುರಿಯನ್ನು ಐತಿಹಾಸಿಕ ಎನ್ನುವಂತೆ 5 ವರ್ಷ ಮೊದಲೇ ಸಾಧಿಸಿದರು. ಅಲ್ಲದೇ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ಭಾರತವನ್ನು ಜಗತ್ತಿನ 2ನೇ ಅತಿದೊಡ್ಡ ಸೋಲಾರ್ ಮಾರುಕಟ್ಟೆಯಾಗಿ ನಿರ್ಮಿಸಿದ್ದು ಪ್ರಲ್ಹಾದ್‌ ಜೋಶಿ ಅವರ ಕಾರ್ಯಕ್ಷಮತೆ ಮತ್ತು ದೂರದೃಷ್ಟಿ ನಾಯಕತ್ವಕ್ಕೆ ನಿದರ್ಶನ.

ಜಗತ್ತಿನಲ್ಲಿ ಹವಾಮಾನ ಬದಲಾವಣೆ ತಗ್ಗಿಸಲು ಇಂಗಾಲ ಹೊರಸೂಸುವಿಕೆಯಲ್ಲಿ ತ್ವರಿತ ಕಡಿತದ ಅಗತ್ಯವಿದೆಯೆಂದು ಪ್ರತಿಪಾದಿಸುತ್ತಲೇ ಬಂದಿರುವ ಪ್ರಲ್ಹಾದ್‌ ಜೋಶಿ, 2028ರ ವೇಳೆಗೆ ಭಾರತ ಸ್ಥಳೀಯ ಸೌರಕೋಶ ಉತ್ಪಾದನೆ ಸಾಧಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿರಿಸಿದ್ದಲ್ಲದೆ, ಯುವ ಸಮೂಹ ಹಸಿರು ಇಂಧನ ಉತ್ಪಾದನೆ ಕೌಶಲ್ಯ ಹೊಂದಲು 2½ ತಿಂಗಳ ಕೋರ್ಸ್ ಸಹ ಪ್ರಾರಂಭಿಸಿ ನವೀಕರಿಸಬಹುದಾದ ಇಂಧನ ವಲಯಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ.

error: Content is protected !!