January14, 2026
Wednesday, January 14, 2026
spot_img

IPL ಹರಾಜಿನಲ್ಲಿ ಅನ್​ಸೋಲ್ಡ್: ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ ಕಾನ್ವೇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಾಜಿನ ವೇದಿಕೆಯಲ್ಲಿ ಹೆಸರು ಕೂಗಿಸದೇ ಉಳಿದ ಆಟಗಾರನ ಬ್ಯಾಟ್ ಮೈದಾನದಲ್ಲಿ ಮಾತನಾಡಿದರೆ ಹೇಗಿರುತ್ತದೆ ಎಂಬುದಕ್ಕೆ ನ್ಯೂಜಿಲೆಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ತಾಜಾ ಉದಾಹರಣೆ ಆಗಿದ್ದಾರೆ. ಐಪಿಎಲ್ 2026 ಮಿನಿ ಹರಾಜಿನಲ್ಲಿ ಯಾವುದೇ ತಂಡದ ಆಸಕ್ತಿ ಪಡೆಯದೇ ಉಳಿದ ಕಾನ್ವೇ, ಕೆಲವೇ ದಿನಗಳ ಅಂತರದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕಾನ್ವೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 149 ಎಸೆತಗಳಲ್ಲಿ ಶತಕ ಪೂರೈಸಿದ ಅವರು 17 ಬೌಂಡರಿಗಳೊಂದಿಗೆ ಇನಿಂಗ್ಸ್ ಅಲಂಕರಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಆರನೇ ಶತಕವಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಶತಕವೂ ಆಗಿದೆ.

ಟಾಮ್ ಲೇಥಮ್ ಜೊತೆ ಆರಂಭಿಕನಾಗಿ ಕ್ರೀಸ್‌ಗೆ ಬಂದ ಕಾನ್ವೇ, ಶತಕದ ಜೊತೆಗೆ ಮಹತ್ವದ ಜೊತೆಯಾಟವನ್ನೂ ಕಟ್ಟಿದರು. ಲೇಥಮ್ ಕೂಡ ಶತಕ ಬಾರಿಸುವ ಮೂಲಕ ನ್ಯೂಜಿಲೆಂಡ್‌ಗೆ ಬಲವಾದ ಆರಂಭ ಒದಗಿಸಿದರು.

ಐಪಿಎಲ್ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿದ್ದ ಕಾನ್ವೇ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಲಿಲ್ಲ. 2022ರಿಂದ 2025ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಅವರು 29 ಪಂದ್ಯಗಳಲ್ಲಿ 1080 ರನ್ ಗಳಿಸಿದ್ದರು. ಹರಾಜಿನ ನಿರಾಸೆಯ ನಡುವೆಯೂ ಕಾನ್ವೇ ತೋರಿದ ಈ ಟೆಸ್ಟ್ ಶತಕ, ಅವರ ಸಾಮರ್ಥ್ಯಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ.

Most Read

error: Content is protected !!