Wednesday, November 26, 2025

ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಲೋಕಾ ಬಲೆಗೆ: ಶೇ.207ರಷ್ಟು ಅಕ್ರಮ ಆಸ್ತಿ!

ಹೊಸದಿಗಂತ ವರದಿ ಹಾವೇರಿ:

ಜಿಲ್ಲೆಯಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜನಿಯರ್ ಬಲೆಗೆ ಬೀಳಿಸಿದ್ದಾರೆ.

ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಶೇಖಪ್ಪ ಸಣ್ಣಪ್ಪ ಮತ್ತಿಕಟ್ಟಿ ಲೋಕಾ ಬಲೆಗೆ ಬಿದ್ದವರು.

ಆದಾಯಕ್ಕಿಂತ ಶೇ.207ರಷ್ಟು ಹೆಚ್ಚುವರಿ ಸಂಪತ್ತು ಗಳಿಸಿದ ಆರೋಪವಿದ್ದು, ಶೇಖಪ್ಪನಿಗೆ ಸಂಬಂಧಿಸಿದ ಮನೆ, ವಾಣಿಜ್ಯ ಸಂಕೀರ್ಣ ಸೇರಿ 6 ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 17 ನಿವೇಶನಗಳು, 1 ವಾಣಿಜ್ಯ ಕಟ್ಟಡ, 2 ವಸತಿ ಕಟ್ಟಡ ಹಾಗೂ ಸಂಬಂಧಿಕರ ಹೆಸರಲ್ಲೂ ಅಕ್ರಮ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಒಟ್ಟು 3, 46, 68,587 ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಲೋಕಾ ಅಧಿಕಾರಿಗಳು ಅಂದಾಜಿಸಿದ್ದಾರೆ..

ಹುಬ್ಬಳ್ಳಿ ಅಕ್ಷಯ ಪಾರ್ಕ್ ನಲ್ಲಿ 3 ಗುಂಟೆ 8 ಅಣೆ ವಿಸ್ತೀರ್ಣದ ಕಮರ್ಷಿಯಲ್ ಕಾಂಪ್ಲೆಕ್ಸ್.
ಹುಬ್ಬಳ್ಳಿ ಬೈರಿದೇವರಿಕೊಪ್ಪ ಗ್ರಾಮದಲ್ಲಿ 2 ಅಂತಸ್ಥಿನ ಆರ್ ಸಿಸಿ ಮನೆ ದಾವಣಗೆರೆಯಲ್ಲೂ ಆರ್ ಸಿ ಸಿ ಮನೆ ಇರುವುದು ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾಗಿದೆ.

ಲೋಕಾಯುಕ್ತ ದಾಳಿ ವೇಳೆ ಇಇ ಶೇಖಪ್ಪ ಕಳ್ಳಾಟ ಬಯಲಾಗಿದ್ದು, ಹೆದ್ದಾರಿ ಟೋಲ್ ಗೇಟ್ ಗಳಿಗೂ ವಂಚಿಸುತ್ತಿದ್ದುದು ಬೆಳಕಿಗೆ ಬಂದಿದೆ.

ಅಧಿಕಾರಿಯ ಹೆಂಡತಿ, ಮಕ್ಕಳು ಬಳಸುತ್ತಿದ್ದ ಕಾರಿಗೂ ಸರ್ಕಾರದ ನೇಮ್ ಪ್ಲೇಟ್ ಅಳವಡಿಸಿದ್ದಾರೆ. 2 ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೀತಿಯಲ್ಲಿ ವಾಹನಕ್ಕೆ ನಾಮಫಲಕ ಅಳವಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಯ ನಾಮಫಲಕ ದುರ್ಬಳಕೆ ಮಾಡಿದ್ದು, ಟೋಲ್ ಗೇಟ್ ಗಳಿಗೆ ಶುಲ್ಕ ಪಾವತಿಸದೇ ಸಂಚಾರ ನಡೆಸಲು ಈ ರೀತಿ ಪ್ಲ್ಯಾನ್ ಮಾಡಿದ್ದರು ಎಂದು ತಿಳಿದು ಸ್ವತಃ ಲೋಕಾ ಅಧಿಕಾರಿಗಳೇ ತಬ್ಬಿಬ್ಬಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಿಂದ ವರ್ಗಾವಣೆ ಆಗಿ ಕೆಲವು ವರ್ಷಗಳೇ ಕಳೆದಿದ್ದರೂ ಸಹ ಚಿಕ್ಕಮಗಳೂರು ಜಿಲ್ಲೆಯ ಕರ್ತವ್ಯದ ಹೆಸರಲ್ಲಿ ವಾಹನ ದುರ್ಬಳಕೆ ಮಾಡಿಕೊಳ್ಳುತ್ತಿದ್ದುದು ಬೆಳಕಿಗೆ ಬಂದಿದೆ.

error: Content is protected !!