ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಅಮೆರಿಕ ನಡುವೆ ಸುಂಕ ಸಮರ ಮತ್ತು ವೀಸಾ ಸಮರದ ನಡುವೆ ಟ್ರಂಪ್ ಅವರ ಆಪ್ತ ರಾಜಕೀಯ ಸಹಾಯಕ ಹಾಗೂ ಭಾರತಕ್ಕೆ ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾಗಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ‘ಭಾರತಕ್ಕೆ ಅಮೆರಿಕದ ನಿಯೋಜಿತ ರಾಯಭಾರಿ
ಸೆರ್ಗಿಯೊ ಗೋರ್ ಅವರನ್ನು ಸ್ವಾಗತಿಸಲು ಸಂತೋಷವಾಗಿದೆ. ಅವರ ಅಧಿಕಾರಾವಧಿಯು ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
ಅದೇ ರೀತಿ ಸೆರ್ಗಿಯೊ ಗೋರ್ ಕೂಡ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದು, ಭಾರತದ ರಾಯಭಾರಿಯಾಗಿ ನನ್ನ ಭವಿಷ್ಯದ ದಿನಗಳ ಬಗ್ಗೆ ಆಶಾವಾದಿಯಾಗಿದ್ದೇನೆ’ ಎಂದು ಹೇಳಿದ್ದಾರೆ.
ಜೊತೆಗೆ ಮೋದಿ ಅವರ ಭೇಟಿ ಬಳಿಕ ಮಾತನಾಡಿರುವ ಸೆರ್ಗಿಯೊ ಗೋರ್, ಟ್ರಂಪ್ ಅವರ ವಿದೇಶ ಸಂದೇಶವನ್ನ ಹಂಚಿಕೊಂಡಿದ್ದಾರೆ. ʻಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರನ್ನ ವೈಯಕ್ತಿಕ ಸ್ನೇಹಿತ ಹಾಗೂ ಗ್ರೇಟ್ ಫ್ರೆಂಡ್ ಅಂತಲೇ ಪರಿಗಣಿಸುತ್ತಾರೆ ಎಂದು ತಿಳಿಸಿದ್ದಾರೆ.
ಉಭಯ ನಾಯಕರ ನಡುವಿನ ಭೇಟಿಯು ಪ್ರಸ್ತುತ ಭಾರತ-ಅಮೆರಿಕ ನಡುವಿನ ವ್ಯಾಪಾರ ಯುದ್ಧಕ್ಕೆ ತೆರೆ ಎಳೆಯಲಿದೆ. ಜೊತೆಗೆ ಪರಸ್ಪರ ದ್ವಿಪಕ್ಷೀಯ ಸಹಕಾರಕ್ಕೆ ನೆರವಾಗಲಿದೆ ಎಂದು ನಂಬಲಾಗಿದೆ.