ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ವಿಧಿಸಿರುವ ಹೆಚ್ಚುವರಿ ಸುಂಕ ಆಗಸ್ಟ್ 27ರಿಂದ ಅನ್ವಯವಾಗಲಿದೆ. ಭಾರತದ ಮೇಲೆ ಹೆಚ್ಚುವರಿ ಶೇ. 25ರಷ್ಟು ಸುಂಕ ವಿಧಿಸುವ ಮೂಲಕ ಒಟ್ಟು ಸುಂಕವನ್ನು ಶೇ. 50ಕ್ಕೆ ಏರಿಸಲಾಗಿದೆ.
ಈ ಹಿನ್ನೆಲೆ ಮಂಗಳವಾರ (ಆಗಸ್ಟ್ 26) ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.
ಭಾರತೀಯ ರಫ್ತುದಾರರಿಗೆ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಭೆಯನ್ನು ಕರೆಯಲಾಗಿದೆ. ಈ ಸಭೆಯು ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದಲ್ಲಿ ಹೆಚ್ಚಿನ ಸುಂಕಗಳ ಪರಿಣಾಮವನ್ನು ಎದುರಿಸಲು ಭಾರತೀಯ ರಫ್ತುದಾರರಿಗೆ ಸೂಕ್ತ ಕ್ರಮಗಳನ್ನು ನಿರ್ದೇಶಿಸಲು ನಡೆಯುವ ಉನ್ನತ ಮಟ್ಟದ ಈ ಸಭೆ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಶೇ. 25ರಷ್ಟು ತೆರಿಗೆಯನ್ನು ಅರ್ಥ ಮಾಡಿಕೊಳ್ಳಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ರಫ್ತುದಾರರು ಮತ್ತು ರಫ್ತು ಉತ್ತೇಜನಾ ಮಂಡಳಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ.