Saturday, December 20, 2025

ಸಿರಿಯಾದ ಐಸಿಸ್ ನೆಲೆಗಳ ಮೇಲೆ ಅಮೆರಿಕ ದಾಳಿ! ರಿವೆಂಜ್ ತೀರಿಸಿಕೊಂಡ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯ ಸಿರಿಯಾದಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಅಮೆರಿಕ ಸೇನೆ ಐಸಿಸ್ ವಿರುದ್ಧ ಭಾರೀ ಸೇನಾ ಕಾರ್ಯಾಚರಣೆ ನಡೆಸಿದೆ. ಲಭ್ಯ ಮಾಹಿತಿಯಂತೆ, ಮಧ್ಯರಾತ್ರಿ ಅಮೆರಿಕ ಯುದ್ಧವಿಮಾನಗಳು ಸಿರಿಯಾದ ವಿವಿಧ ಭಾಗಗಳಲ್ಲಿ ಇರುವ 70ಕ್ಕೂ ಹೆಚ್ಚು ಐಸಿಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿವೆ. ಇತ್ತೀಚೆಗೆ ಅಮೆರಿಕ ಸೈನಿಕರ ಮೇಲೆ ನಡೆದ ಮಾರಣಾಂತಿಕ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 13ರಂದು ಪಾಲ್ಮಿರಾ ಪ್ರದೇಶದಲ್ಲಿ ಅಮೆರಿಕ ಹಾಗೂ ಮಿತ್ರ ಪಡೆಗಳ ಮೇಲೆ ನಡೆದ ದಾಳಿಯಲ್ಲಿ ಅಮೆರಿಕ ಸೈನಿಕರು ಸಾವನ್ನಪ್ಪಿದ್ದರು. ಈ ಘಟನೆಯೇ ಈಗಿನ ಪ್ರತೀಕಾರದ ದಾಳಿಗೆ ಕಾರಣವಾಗಿದೆ. ರಕ್ಷಣಾ ಇಲಾಖೆ ಮಾಹಿತಿ ಪ್ರಕಾರ, ಐಸಿಸ್ ಬಳಸುತ್ತಿದ್ದ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಗಳು, ತರಬೇತಿ ಶಿಬಿರಗಳು ಮತ್ತು ಅಡಗು ತಾಣಗಳನ್ನು ನಿಖರವಾಗಿ ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಇದು ಹೊಸ ಯುದ್ಧದ ಆರಂಭವಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದ್ದು, ತಮ್ಮ ಸೈನಿಕರ ಮೇಲೆ ದಾಳಿ ನಡೆದರೆ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದೆ. ವಿಶ್ವದ ಯಾವುದೇ ಭಾಗದಲ್ಲಾದರೂ ಅಮೆರಿಕ ನಾಗರಿಕರು ಅಥವಾ ಸೇನೆ ಗುರಿಯಾಗಿದರೆ ದಾಳಿಕೋರರನ್ನು ಹಿಂಬಾಲಿಸಿ ನಿರ್ಮೂಲನೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಐಸಿಸ್ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಸಿರಿಯಾದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರುವ ಉಗ್ರ ಸಂಘಟನೆಯನ್ನು ಸಂಪೂರ್ಣವಾಗಿ ನಾಶಪಡಿಸುವುದು ಅಮೆರಿಕದ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

error: Content is protected !!