ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ವೆನೆಜುವೆಲಾಗೆ ಸೇರಿದ ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದೆ. ಅಟ್ಲಾಂಟಿಕ್ ಸಾಗರದಲ್ಲಿ ಸುಮಾರು 2 ವಾರಗಳ ಕಾಲ ಯುಎಸ್ ಕೋಸ್ಟ್ ಗಾರ್ಡ್ ಹಡಗನ್ನು ಹಿಂಬಾಲಿಸಿತು. ವೆನೆಜುವೆಲಾದ ತೈಲ ರಫ್ತಿನ ಮೇಲೆ ಅಮೆರಿಕದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯ ಸಮಯದಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಏಕೆಂದರೆ, ರಷ್ಯಾದ ಮಿಲಿಟರಿ ಹಡಗು ಮತ್ತು ಜಲಾಂತರ್ಗಾಮಿ ನೌಕೆ ಕೂಡ ಆ ಪ್ರದೇಶದಲ್ಲಿತ್ತು. ಆದರೆ, ರಷ್ಯಾ ಮತ್ತು ಅಮೆರಿಕ ದೇಶಗಳ ನಡುವೆ ಯಾವುದೇ ಮಿಲಿಟರಿ ಘರ್ಷಣೆ ಸಂಭವಿಸಿಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ರಷ್ಯಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಅಮೆರಿಕ ವಶಪಡಿಸಿಕೊಂಡ ಹಡಗನ್ನು ಈ ಹಿಂದೆ ಬೆಲ್ಲಾ-1 ಎಂದು ಹೆಸರಿಸಲಾಗಿತ್ತು. ನಂತರ ಅದು ತನ್ನ ಹೆಸರನ್ನು ಮರಿನೆರಾ ಎಂದು ಬದಲಾಯಿಸಿಕೊಂಡಿತು. ಇದನ್ನು ರಷ್ಯಾದ ಧ್ವಜದ ಅಡಿಯಲ್ಲಿ ನೋಂದಾಯಿಸಲಾಗಿದೆ.
ಐಸ್ಲ್ಯಾಂಡ್ ಬಳಿಯ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಹಡಗನ್ನು ಅಂತಿಮವಾಗಿ ತಡೆಹಿಡಿಯಲಾಯಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಅದು ಐಸ್ಲ್ಯಾಂಡ್ ಮತ್ತು ಬ್ರಿಟನ್ ನಡುವೆ ಪ್ರಯಾಣಿಸುತ್ತಿತ್ತು. ಸಂಪೂರ್ಣ ಕಾರ್ಯಾಚರಣೆಯನ್ನು ಯುಎಸ್ ಕೋಸ್ಟ್ ಗಾರ್ಡ್ ಮತ್ತು ಸೈನ್ಯ ಜಂಟಿಯಾಗಿ ನಡೆಸಿತು. ಯುಎಸ್ ಸೈನ್ಯದ ಯುರೋಪಿಯನ್ ಕಮಾಂಡ್ (EUCOM) ಸಾಮಾಜಿಕ ಮಾಧ್ಯಮದಲ್ಲಿ ಆ ತೈಲ ಟ್ಯಾಂಕರ್ ಹಡಗು ಯುಎಸ್ ನಿರ್ಬಂಧಗಳನ್ನು ಉಲ್ಲಂಘಿಸುತ್ತಿದೆ. ಇದೇ ಕಾರಣಕ್ಕೆ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಘೋಷಿಸಿತು.

