February 6, 2026
Friday, February 6, 2026
spot_img

ತಿರುಪತಿ ಲಡ್ಡುಗೆ ಬಾತ್‌ರೂಮ್ ಕ್ಲೀನಿಂಗ್ ರಾಸಾಯನಿಕದ ತುಪ್ಪ ಬಳಕೆ: ಸಿಎಂ ಚಂದ್ರಬಾಬು ನಾಯ್ಡು ಸ್ಪೋಟಕ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ ಬಾತ್‌ರೂಮ್ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬಳಸಲಾಗಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಕರ್ನೂಲ್ ಜಿಲ್ಲೆಯ ಕಲುಗೊಟ್ಲಾ ಗ್ರಾಮದಲ್ಲಿ ಗ್ರಾಮಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ಅಂದಿನ ಸರಕಾರ (ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರ) ಲಡ್ಡುಗಳಲ್ಲಿ ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್‌ಗಳಿಂದ ತಯಾರಿಸಿದ ತುಪ್ಪವನ್ನು ಬಳಸುತ್ತಿದ್ದರು. ಆ ಮೂಲಕ ಪವಿತ್ರವಾದ ತಿರುಮಲ ದೇವಸ್ಥಾನದ ಪ್ರಸಾದದ ಪಾವಿತ್ರ್ಯತೆ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿಯ ಘನತೆಯನ್ನು ಹಾಳುಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಹಿಂದಿನ ಸರ್ಕಾರದ ಆಡಳಿತದಲ್ಲಿ ರಾಸಾಯನಿಕ ಮಿಶ್ರಿತ ತುಪ್ಪವನ್ನೇ ಲಡ್ಡು ತಯಾರಿಸಲು ಬಳಸಲಾಗಿತ್ತು. ತುಪ್ಪದಲ್ಲಿ ಎರಡು ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಒಂದು ಸಸ್ಯಜನ್ಯ ಮೂಲದ್ದು, ಇದು ದುಬಾರಿಯಿರುತ್ತದೆ. ಆದರೆ ಪ್ರಾಣಿಗಳ ಕೊಬ್ಬು ಅಗ್ಗವಾಗಿ ಸಿಗುತ್ತದೆ. ಹಣ ಉಳಿಸುವ ದುರಾಸೆಗೆ ಬಿದ್ದು ದೇವರ ಪ್ರಸಾದವನ್ನೂ ಬಿಡದೆ ಅಪಚಾರ ಎಸಗಿದ್ದಾರೆ. ಇದಕ್ಕೆ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ (NDDB) ವರದಿಯೇ ಸಾಕ್ಷಿಯಾಗಿದೆ. ಈ ವರದಿಯ ಪ್ರಕಾರ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವುದು ದೃಢಪಟ್ಟಿದೆ ಎಂದರು.

ಇದೇ ವೇಳೆ ವಿಶೇಷ ತನಿಖಾ ದಳ (SIT) ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ ಎಂದು ವೈಎಸ್‌ಆರ್‌ಸಿಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ನಾಯ್ಡು, ‘ಜಗನ್ ಅವರ ಚಿಕ್ಕಪ್ಪ ಮತ್ತು ಟಿಟಿಡಿಯ ಮಾಜಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರೇ ಈ ಹಿಂದೆ ಕಲಬೆರಕೆ ನಡೆದಿರುವುದನ್ನು ಒಪ್ಪಿಕೊಂಡಿದ್ದರು. ಈಗ ಎಸ್‌ಐಟಿ ವರದಿಯ ನೆಪ ಹೇಳಿ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ಆದರೆ, ನನ್ನ ಸರ್ಕಾರ ಈ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ. ಈಗ ತಯಾರಾಗುತ್ತಿರುವ ಲಡ್ಡುಗಳಿಗೂ ಮತ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ತಯಾರಾಗುತ್ತಿದ್ದ ಲಡ್ಡುಗಳಿಗೂ ಸಾಕಷ್ಟು ವ್ಯತ್ಯಾಸವಿದೆ’ ಎಂದು ಹೇಳಿದರು.

ವೈಎಸ್‌ಆರ್‌ಸಿಪಿ ಪ್ರತಿಕ್ರಿಯೆ
ಚಂದ್ರಬಾಬು ನಾಯ್ಡು ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವೈಎಸ್‌ಆರ್‌ಸಿಪಿ ರಾಜ್ಯಸಭಾ ಸಂಸದ ವೈ.ವಿ. ಸುಬ್ಬಾರೆಡ್ಡಿ, ‘2022ರ ಸಿಎಫ್‌ಟಿಆರ್‌ಐ ವರದಿಯಲ್ಲಿ ಕಲಬೆರಕೆ ಬಗ್ಗೆ ಉಲ್ಲೇಖವಿದ್ದರೂ, ಅದರಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ನಾನೇ ಸ್ವತಃ ಪತ್ರ ಬರೆದು ಪರೀಕ್ಷೆಗೆ ಕಳುಹಿಸಿದ್ದೆ. ಹೀಗಿರುವಾಗ ನಾನು ವರದಿಯನ್ನು ಮುಚ್ಚಿಟ್ಟೆ ಎಂಬ ಆರೋಪದಲ್ಲಿ ಹುರುಳಿಲ್ಲ. ಎಸ್‌ಐಟಿ ವರದಿ ಕ್ಲೀನ್ ಚಿಟ್ ನೀಡಿದ್ದರೂ, ಟಿಡಿಪಿ ಸರ್ಕಾರ ಸುಳ್ಳು ಸುದ್ದಿ ಹಬ್ಬಿಸುತ್ತಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !