ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಬಂದಾ ಜಿಲ್ಲೆಯ ರಿಸೌರಾ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಕುಟುಂಬದ ಕಲಹದಿಂದ ಬೇಸರಗೊಂಡ ಮಹಿಳೆ, ತನ್ನ ಮೂವರು ಪುಟ್ಟ ಮಕ್ಕಳನ್ನು ಬಟ್ಟೆಯಿಂದ ಸೊಂಟಕ್ಕೆ ಕಟ್ಟಿಕೊಂಡು ಕಾಲುವೆಗೆ ಹಾರಿ ಜೀವ ಕಳೆದುಕೊಂಡಿದ್ದಾಳೆ.
ಮೃತರನ್ನು 30 ವರ್ಷದ ರೀನಾ ಹಾಗೂ ಅವರ ಮಕ್ಕಳು ಹಿಮಾಂಶು (9), ಅನ್ಶಿ (5) ಮತ್ತು ಪ್ರಿನ್ಸ್ (3) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಪತಿ ಅಖಿಲೇಶ್ ಜೊತೆ ನಡೆದ ವಾಗ್ವಾದದ ಬಳಿಕ, ರೀನಾ ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದಳು ಮರುದಿನ ದಿನ ಬೆಳಗ್ಗೆ ನಾಲ್ವರೂ ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು.
ಕಾಲುವೆ ದಡದ ಬಳಿ ಅವರ ಬಟ್ಟೆಗಳು, ಬಳೆಗಳು, ಚಪ್ಪಲಿಗಳು ಮತ್ತು ಇತರ ವಸ್ತುಗಳು ಪತ್ತೆಯಾಗಿದ್ದು, ಪೊಲೀಸರು ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದರು. ನೀರಿನ ಮಟ್ಟ ಕಡಿಮೆ ಮಾಡಿದ ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ, ಐದು-ಆರು ಗಂಟೆಗಳ ನಂತರ ನಾಲ್ವರ ಶವಗಳನ್ನು ಒಟ್ಟಿಗೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಯಿತು.
ಪೊಲೀಸರು ಪತಿ ಅಖಿಲೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವ ರಾಜ್ ಅವರ ಪ್ರಕಾರ, ಕುಟುಂಬ ಕಲಹವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದಿದ್ದಾರೆ.