March 12, 2026
Thursday, March 12, 2026
spot_img

ಬಿಸಿಲ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆ ತತ್ತರ: ಆರೋಗ್ಯ ಕಾಪಾಡಿಕೊಳ್ಳಲು ಇರಲಿ ಎಚ್ಚರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಬರುವ ಎರಡು ದಿನಗಳ ಕಾಲ ಉಷ್ಣಾಂಶದಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ತೀವ್ರ ಜಾಗರೂಕತೆಯಿಂದ ಇರಬೇಕೆಂದು ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.

ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಫೆಬ್ರವರಿ 17 ಮತ್ತು 18 ರಂದು ಜಿಲ್ಲೆಯ ಗರಿಷ್ಠ ಉಷ್ಣಾಂಶವು 34°C ನಿಂದ 38.9°C ವರೆಗೆ ಏರಿಕೆಯಾಗುವ ಸಂಭವವಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ ಸುಮಾರು 3 ರಿಂದ 4 ಡಿಗ್ರಿ ಸೆಲ್ಸಿಯಸ್‌ ಅಧಿಕವಾಗಿದ್ದು, ಜನಸಾಮಾನ್ಯರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದೆ.

ಅತಿಯಾದ ಬಿಸಿಲಿನಿಂದಾಗಿ ದೇಹದ ಉಷ್ಣ ನಿಯಂತ್ರಣ ವ್ಯವಸ್ಥೆ ಏರುಪೇರಾಗಬಹುದು. ಇದರ ಪರಿಣಾಮವಾಗಿ:

ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು.

ತಲೆಸುತ್ತು, ತಲೆನೋವು ಮತ್ತು ಅತಿಯಾದ ದಣಿವು.

ಚರ್ಮದ ಒಣಗುವಿಕೆ ಹಾಗೂ ಪ್ರಜ್ಞೆ ತಪ್ಪುವ ಸಾಧ್ಯತೆ.

ಹೆಚ್ಚುತ್ತಿರುವ ಉಷ್ಣಾಂಶದ ಅಪಾಯದಿಂದ ಪಾರಾಗಲು ಸಾರ್ವಜನಿಕರು ಈ ಕೆಳಗಿನ ಕ್ರಮಗಳನ್ನು ಪಾಲಿಸಲು ಕೋರಲಾಗಿದೆ:

ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು, ಎಳನೀರು ಅಥವಾ ಮಜ್ಜಿಗೆಯನ್ನು ಸೇವಿಸಿ.

ಮಧ್ಯಾಹ್ನದ ಉರಿ ಬಿಸಿಲಿನಲ್ಲಿ (ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ) ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ.

ಹೊರಹೋಗುವಾಗ ಹಗುರವಾದ ಸುತಿ ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ, ಕೊಡೆ ಅಥವಾ ಹ್ಯಾಟ್ ಬಳಸಿ.

ತಲೆಸುತ್ತು ಅಥವಾ ಸುಸ್ತು ಕಾಣಿಸಿಕೊಂಡಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ತೆರಳಿ ವೈದ್ಯಕೀಯ ಸಲಹೆ ಪಡೆಯಿರಿ.

ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !