ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಹಲವು ಬೆಳವಣಿಗೆಗಳ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ಅವರು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. ಅದರಲ್ಲೂ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿಯಿಂದ ಬೆಂಬಲವಿದೆ ಎಂಬ ವದಂತಿಗಳಿಗೆ ಅವರು ಸ್ಪಷ್ಟವಾಗಿ ತೆರೆ ಎಳೆದಿದ್ದಾರೆ.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿ. ಸೋಮಣ್ಣ, “ಡಿ.ಕೆ. ಶಿವಕುಮಾರ್ ಅವರ ಅವಶ್ಯಕತೆ ಬಿಜೆಪಿಗೆ ಇಲ್ಲ. ಆ ಬಗ್ಗೆ ನಾವು ಯೋಚನೆಯನ್ನು ಕೂಡ ಮಾಡಿಲ್ಲ. ಬಿಜೆಪಿ ಪಕ್ಷವು ಬಲಿಷ್ಠವಾಗಿದೆ,” ಎಂದು ದಿಟ್ಟ ಉತ್ತರ ನೀಡಿದ್ದಾರೆ.
ಲಜ್ಜೆಗೆಟ್ಟ ಸರ್ಕಾರ: 60% ಕಮಿಷನ್ ಆರೋಪ
ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳನ್ನು “ಕುರ್ಚಿಗಾಗಿ ನಡೆಯುತ್ತಿರುವ ನಾಟಕ” ಎಂದು ಬಣ್ಣಿಸಿದ ಸೋಮಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಲಜ್ಜೆಗೆಟ್ಟ, ಭ್ರಷ್ಟಾಚಾರ, ಮರ್ಯಾದಿ ಬಿಟ್ಟ ಸರ್ಕಾರ ಯಾವುದಾದರೂ ಇದ್ದರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿಎಂ ಸಿದ್ದರಾಮಯ್ಯ,” ಎಂದು ಅವರು ಆಪಾದಿಸಿದರು. ಕಳೆದ ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ತನಿಖೆಯನ್ನು ಮಾಡಲಿಲ್ಲ. ಬದಲಿಗೆ, “ಎಲ್ಲಾ ಕಾಮಗಾರಿಯಲ್ಲೂ 60% ಕಮಿಷನ್ ದಂಧೆ” ಈಗಲೂ ಮುಂದುವರಿದಿದೆ ಎಂದು ಗಂಭೀರ ಆರೋಪ ಮಾಡಿದರು.
ಸರ್ಕಾರ ವಿಸರ್ಜನೆ ಮಾಡಿ ಜನಾದೇಶಕ್ಕೆ ಹೋಗಲಿ
ಜನರ ಭಾವನೆಗಳಿಗೆ ಬೆಲೆ ಕೊಡದೆ ಆಡಳಿತ ನಡೆಸುತ್ತಿರುವ ಈ ಸರ್ಕಾರದ ಪಾಪದ ಕೊಡ ತುಂಬಿ ಹೋಗಿದೆ. “ಕೆಲವೇ ದಿನಗಳಲ್ಲಿ ಪ್ರಾಯಶ್ಚಿತ ಆಗುತ್ತೆ,” ಎಂದು ಅವರು ಭವಿಷ್ಯ ನುಡಿದರು.
“ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಒಟ್ಟಿಗೆ ಮಂತ್ರಿಗಳಾಗಿದ್ದವರು. ಆದರೆ, ಇಷ್ಟೊಂದು ಬಲಹೀನ ಮತ್ತು ಭ್ರಷ್ಟ ಸರ್ಕಾರವನ್ನು ನಾನು ಎಲ್ಲಿಯೂ ನೋಡಿಲ್ಲ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ರಾಜ್ಯ ಸರ್ಕಾರವು ವಿಸರ್ಜನೆಗೊಂಡು, ಮತ್ತೊಮ್ಮೆ ಜನಾದೇಶಕ್ಕೆ ಹೋಗಬೇಕು ಎಂದು ವಿ. ಸೋಮಣ್ಣ ಆಗ್ರಹಿಸಿದರು.

