Friday, December 19, 2025

ದುಬೈನಲ್ಲಿ ವೈಭವ್ ಸೂರ್ಯವಂಶಿ ದರ್ಬಾರ್: ಮುರಿದು ಬಿತ್ತು ಮೈಕೆಲ್ ಹಿಲ್ ದಾಖಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರ ಅಬ್ಬರ ಮುಂದುವರಿದಿದೆ. T20 ಮಾದರಿಯಲ್ಲಿ ಮಿಂಚಿದ್ದ ವೈಭವ್ ಈಗ ಏಕದಿನ ಕ್ರಿಕೆಟ್‌ನಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಅವರು ವಿಶ್ವ ದಾಖಲೆಯೊಂದನ್ನು ಸಹ ನಿರ್ಮಿಸಿದ್ದಾರೆ.

ದುಬೈನಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸಂಭ್ರಮಿಸಿದ ವೈಭವ್, ಯುಎಇ ವಿರುದ್ಧ ಅಸಾಧ್ಯವಾದ ಶತಕವನ್ನು ದಾಖಲಿಸಿದರು. ಆರಂಭಿಕನಾಗಿ ಕಣಕ್ಕಿಳಿದ ವೈಭವ್, ಎದುರಾಳಿ ಬೌಲರ್‌ಗಳ ಮೇಲೆ ಮೊದಲ ಓವರ್‌ನಿಂದಲೇ ಸವಾರಿ ಮಾಡಿದರು. ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಶತಕದ ಬಳಿಕವೂ ತಮ್ಮ ಆಕ್ರಮಣಕಾರಿ ಆಟವನ್ನು ನಿಲ್ಲಿಸಲಿಲ್ಲ.

ಅಂತಿಮವಾಗಿ, ವೈಭವ್ ಸೂರ್ಯವಂಶಿ ಕೇವಲ 95 ಎಸೆತಗಳಲ್ಲಿ 14 ಭರ್ಜರಿ ಸಿಕ್ಸ್‌ಗಳು ಮತ್ತು 9 ಬೌಂಡರಿಗಳ ಸಹಿತ 171 ರನ್ ಗಳಿಸಿದರು.

ಈ ಇನಿಂಗ್ಸ್‌ನಲ್ಲಿ ವೈಭವ್ ಬಾರಿಸಿದ 14 ಸಿಕ್ಸ್‌ಗಳು, ಅಂಡರ್-19 ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಒಂದು ಪಂದ್ಯದಲ್ಲಿ ಬ್ಯಾಟರ್ ಒಬ್ಬರು ಸಿಡಿಸಿದ ಅತ್ಯಧಿಕ ಸಿಕ್ಸರ್‌ಗಳ ವಿಶ್ವ ದಾಖಲೆಯಾಗಿದೆ. ಈ ಮೊದಲು, 2008 ರಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮೈಕೆಲ್ ಹಿಲ್ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ 12 ಸಿಕ್ಸರ್‌ಗಳನ್ನು ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ 15 ವರ್ಷಗಳ ಈ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಳಿಸಿ ಹಾಕಿದ್ದಾರೆ.

ಇದಲ್ಲದೆ, ಯೂತ್ ಏಕದಿನ ಪಂದ್ಯಗಳಲ್ಲಿ ಎರಡು ಬಾರಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೂ ವೈಭವ್ ಪಾತ್ರರಾಗಿದ್ದಾರೆ. ಯುಎಇ ವಿರುದ್ಧದ 14 ಸಿಕ್ಸರ್‌ಗಳಿಗೂ ಮೊದಲು ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 10 ಸಿಕ್ಸರ್‌ಗಳನ್ನು ಬಾರಿಸಿದ್ದರು. ವೈಭವ್ ಅವರ ಈ ಐತಿಹಾಸಿಕ ಇನ್ನಿಂಗ್ಸ್ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.

error: Content is protected !!