ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್‌ನಲ್ಲಿ ಕಿರಿಯ ವಯಸ್ಸಿನಲ್ಲೇ ಗುರುತಿಸಿಕೊಂಡಿರುವ ಪ್ರತಿಭಾವಂತ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಐಪಿಎಲ್‌ನಲ್ಲಿ ಸಿಡಿಲಿನಂತ ಶತಕ ಸಿಡಿಸಿ ಎಲ್ಲರ ಮನ ಗೆದ್ದ ಈ ಕಿರಿಯ ಕ್ರಿಕೆಟಿಗ ಇದೀಗ ಬಿಹಾರ ತಂಡದ ರಣಜಿ ಟ್ರೋಫಿ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಕೇವಲ 14ನೇ ವಯಸ್ಸಿನಲ್ಲೇ ಅವರು ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಅಕ್ಟೋಬರ್ 15ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಪ್ಲೇಟ್ ಲೀಗ್ ಸೀಸನ್‌ನಲ್ಲಿ ಬಿಹಾರ ತಂಡ ಅರುಣಾಚಲ ಪ್ರದೇಶ ವಿರುದ್ಧ ಮೊದಲ ಪೈಪೋಟಿ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಪ್ರಕಟಗೊಂಡ ತಂಡದ ಪಟ್ಟಿ ವೈಭವ್ ಅಭಿಮಾನಿಗಳಲ್ಲಿ ಸಂತೋಷದ ಅಲೆ ಎಬ್ಬಿಸಿದೆ. ಕಿರಿಯ ವಯಸ್ಸಿನಲ್ಲಿಯೇ ನಾಯಕತ್ವದ ಹೊಣೆ ಹೊತ್ತಿರುವ ಅವರು ಬಿಹಾರ ಕ್ರಿಕೆಟ್ ಭವಿಷ್ಯ ಎಂದು ಪರಿಣಿತರ ಅಭಿಪ್ರಾಯ.
ವೈಭವ್ ಸೂರ್ಯವಂಶಿ ಕೇವಲ 12ನೇ ವಯಸ್ಸಿನಲ್ಲಿಯೇ ರಣಜಿಗೆ ಪಾದಾರ್ಪಣೆ ಮಾಡಿದ್ದರು. 2023-24ರ ಸೀಸನ್‌ನಲ್ಲಿ ಬಿಹಾರ ಪರ ಮೊದಲ ಬಾರಿಗೆ ಆಡಿದ ಅವರು ಈಗಾಗಲೇ 5 ಪ್ರಥಮ ದರ್ಜೆಯ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಆ ಪಂದ್ಯಗಳಲ್ಲಿ 100 ರನ್ ಬಾರಿಸಿದ ಅವರು, 41 ರನ್ ಅವರ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿದೆ.
ಐಪಿಎಲ್‌ನಲ್ಲಿ ವೈಭವ್ 2025ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಪಾದಾರ್ಪಣೆ ಮಾಡಿ, ಕೇವಲ 7 ಪಂದ್ಯಗಳಲ್ಲಿ 252 ರನ್ ಸಿಡಿಸಿದ್ದರು. 206.55ರ ಸ್ಫೋಟಕ ಸ್ಟ್ರೈಕ್‌ರೇಟ್‌ನಲ್ಲಿ ಬಂದ ಈ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೇ 14ನೇ ವಯಸ್ಸಿನಲ್ಲಿಯೇ ಐಪಿಎಲ್ ಆಡಿದ ಅತಿಕಿರಿಯ ಬ್ಯಾಟರ್ ಎಂಬ ದಾಖಲೆ ಅವರ ಹೆಸರಿಗೆ ಸೇರಿತು.
ಐಪಿಎಲ್‌ನಿಂದ ಪ್ರಾರಂಭಿಸಿ ಯೂಥ್ ಟೆಸ್ಟ್ ಹಾಗೂ ಯೂಥ್ ಒನ್‌ಡೇ ಸರಣಿಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ ಈಗ ರಾಷ್ಟ್ರ ಮಟ್ಟದ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಇಂತಹ ಸಾಧನೆ ತೋರಿಸಿರುವ ಅವರು, ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಪರ ಆಡುವ ವಿಶ್ವಾಸ ತುಂಬಿದ್ದಾರೆ.