ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ದೀರ್ಘದೂರ ರೈಲು ಪ್ರಯಾಣಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಲೋಕಾರ್ಪಣೆ ಮಾಡಿದ್ದಾರೆ. ಕೋಲ್ಕತಾದ ಹೌರಾ ಮತ್ತು ಅಸ್ಸಾಂನ ಕಾಮಾಖ್ಯ ಜಂಕ್ಷನ್ ನಡುವೆ ಸಂಚರಿಸುವ ಈ ರೈಲು, ಪಶ್ಚಿಮ ಬಂಗಾಳ–ಅಸ್ಸಾಂ ಹೈಸ್ಪೀಡ್ ರೈಲು ಜಾಲದ ಪ್ರಮುಖ ಭಾಗವಾಗಿದೆ. ರಾತ್ರಿ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಂಡಿರುವ ಈ ರೈಲು ಹಲವು ಹೊಸ ನಿಯಮಗಳು ಮತ್ತು ಸೌಲಭ್ಯಗಳನ್ನು ಹೊಂದಿದೆ.
ವಂದೇ ಭಾರತ್ ಸ್ಲೀಪರ್ ಟ್ರೈನ್‌ನಲ್ಲಿ ಟಿಕೆಟ್ ರದ್ದುಪಡಿಸುವ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಪ್ರಯಾಣಕ್ಕೆ 72 ಗಂಟೆಗೂ ಹೆಚ್ಚು ಸಮಯ ಉಳಿದಿರುವಾಗ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಕನಿಷ್ಠ ಶೇ.25ರಷ್ಟು ಹಣ ಕಡಿತವಾಗುತ್ತದೆ. ರೈಲು ಹೊರಡುವ 72 ಗಂಟೆಯಿಂದ 8 ಗಂಟೆ ಮುಂಚಿತದೊಳಗೆ ಟಿಕೆಟ್ ರದ್ದುಗೊಳಿಸಿದರೆ ಶೇ.50ರಷ್ಟು ಹಣ ಕಟ್ ಮಾಡಲಾಗುತ್ತದೆ. ಪ್ರಯಾಣಕ್ಕೆ 8 ಗಂಟೆಗೂ ಕಡಿಮೆ ಸಮಯ ಉಳಿದಿದ್ದರೆ ಯಾವುದೇ ರೀಫಂಡ್ ಸಿಗುವುದಿಲ್ಲ.
ಈ ರೈಲು ಗಂಟೆಗೆ 180 ಕಿಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದರೂ, ಪ್ರಸ್ತುತ ಹಳಿ ವ್ಯವಸ್ಥೆಯಲ್ಲಿ 120–130 ಕಿಮೀ ವೇಗದಲ್ಲಿ ಓಡಲಿದೆ. ಆರಾಮದಾಯಕ ಬರ್ತ್‌ಗಳು, ಉತ್ತಮ ಸಸ್ಪೆನ್ಷನ್ ವ್ಯವಸ್ಥೆ ಮತ್ತು ವಿಶ್ವಮಟ್ಟದ ಒಳಾಂಗಣ ವಿನ್ಯಾಸ ಇದರ ವಿಶೇಷತೆ.
ಸ್ವಚ್ಛತೆ ಮತ್ತು ಸುರಕ್ಷತೆಯಲ್ಲೂ ಈ ರೈಲು ಮುಂದಿದೆ. ಶೇ.99ರಷ್ಟು ಸೂಕ್ಷ್ಮಜೀವಿಗಳನ್ನು ನಾಶಮಾಡುವ ತಂತ್ರಜ್ಞಾನ, ಕವಚ್ ಸ್ವಯಂಸಂಚಾಲಿತ ಸುರಕ್ಷತಾ ವ್ಯವಸ್ಥೆ ಮತ್ತು ನಿಲ್ದಾಣದಲ್ಲಿ ಮಾತ್ರ ತೆರೆಯುವ ಸ್ಲೈಡಿಂಗ್ ಬಾಗಿಲುಗಳನ್ನು ಅಳವಡಿಸಲಾಗಿದೆ. ಹೌರಾ–ಕಾಮಾಖ್ಯ ಮಾರ್ಗದ ಟಿಕೆಟ್ ದರ ರೂ.2,300ರಿಂದ ರೂ.3,600ರವರೆಗೆ ಇದ್ದು, ಆಹಾರ ವೆಚ್ಚವೂ ಟಿಕೆಟ್ ದರದಲ್ಲೇ ಸೇರಿದೆ.


