ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಥಿಯೋಪಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಪ್ರಧಾನಿ ಅಬಿ ಅಹ್ಮದ್ ಅಲಿ ಮಂಗಳವಾರ ಸಂಜೆ ಅದ್ಧೂರಿ ಔತಣಕೂಟವನ್ನು ಏರ್ಪಡಿಸಿದ್ದರು. ಈ ಔತಣಕೂಟ ಕೇವಲ ಸ್ವಾದಿಷ್ಟ ಭೋಜನಕ್ಕೆ ಸೀಮಿತವಾಗದೆ, ಭಾರತ ಮತ್ತು ಇಥಿಯೋಪಿಯಾ ನಡುವಿನ ಸಾಂಸ್ಕೃತಿಕ ಬಾಂಧವ್ಯಕ್ಕೆ ಸಾಕ್ಷಿಯಾಯಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಇಥಿಯೋಪಿಯಾದ ಸ್ಥಳೀಯ ಗಾಯಕರು ‘ವಂದೇ ಮಾತರಂ’ ಅನ್ನು ಅತ್ಯಂತ ಸುಮಧುರವಾಗಿ ಹಾಡಿದರು. ವಿದೇಶಿ ನೆಲದಲ್ಲಿ ತಾಯ್ನಾಡಿನ ಗೀತೆಯನ್ನು ಕೇಳಿ ಪ್ರಧಾನಿ ಮೋದಿ ಭಾವುಕರಾದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, “ವಂದೇ ಮಾತರಂ ಗೀತೆಗೆ 150 ವರ್ಷ ತುಂಬುತ್ತಿರುವ ಈ ಸಂಭ್ರಮದ ಸಂದರ್ಭದಲ್ಲಿ, ಇಥಿಯೋಪಿಯಾದ ಗಾಯಕರ ಕಂಠದಲ್ಲಿ ಈ ಗೀತೆಯನ್ನು ಕೇಳಿದ್ದು ಅತ್ಯಂತ ಹೃದಯಸ್ಪರ್ಶಿ ಕ್ಷಣವಾಗಿತ್ತು” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

