Tuesday, January 13, 2026
Tuesday, January 13, 2026
spot_img

ಜ್ಞಾನದ ಕ್ರಾಂತಿಗೆ ‘ವರಲಕ್ಷ್ಮೀ ‘ಯ ಸ್ಪರ್ಶ: ಸಾಲಿಮಕ್ಕಿ ಶಾಲೆ ಮಕ್ಕಳಿಗಿನ್ನು ‘ಸ್ಮಾಟ್೯’ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿಕ್ಷಣವೆಂಬ ಸೌಧಕ್ಕೆ ಆಧುನಿಕತೆಯ ಹೊಸ ಮೆರುಗು ನೀಡುವ ಮೂಲಕ, ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಲು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದವು ಮತ್ತೊಂದು ಹೆಜ್ಜೆ ಇಟ್ಟಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಲಿಮಕ್ಕಿ ಬಿಜೂರಿಗೆ ಸಂಸ್ಥೆಯು ಸ್ಮಾರ್ಟ್ ಕ್ಲಾಸ್ ಕೊಡುಗೆಯನ್ನು ನೀಡಿ, ಡಿಜಿಟಲ್ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟಿದೆ.

ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಡಾ. ಬಾಬು ಗೋವಿಂದ ಪೂಜಾರಿ ಅವರು ಸ್ವತಃ ಶಾಲೆಗೆ ಆಗಮಿಸಿ, ಈ ಮಹತ್ವದ ಸ್ಮಾರ್ಟ್ ಕ್ಲಾಸ್ ಅನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ಮಕ್ಕಳ ಶಿಕ್ಷಣ ಕುಂಠಿತವಾಗಬಾರದು. ಅದರಲ್ಲೂ ವಿಶೇಷವಾಗಿ ಸರಕಾರಿ ಶಾಲೆಗಳ ಮಕ್ಕಳು ಆಧುನಿಕ ಜ್ಞಾನದಿಂದ ವಂಚಿತರಾಗಬಾರದು ಎಂಬುದು ನಮ್ಮ ಆಶಯ. ಇದೇ ಉದ್ದೇಶದಿಂದ ನಾವು ಸರ್ಕಾರಿ ಶಾಲೆಗಳಿಗೆ ಸರಣಿ ಸ್ಮಾರ್ಟ್ ಕ್ಲಾಸ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ,” ಎಂದು ಹೇಳಿದರು.

ಅಲ್ಲದೆ, “ವಿದ್ಯಾರ್ಥಿಗಳು ಈ ಡಿಜಿಟಲ್ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು, ನಾಳಿನ ಸುಂದರ ಸಮಾಜವನ್ನು ಕಟ್ಟುವ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯ ಸದಸ್ಯರು ಕೂಡ ಶಾಲೆಯ ಬಗ್ಗೆ ಅಪಾರವಾದ ಮಮತೆ ಹಾಗೂ ಜವಾಬ್ದಾರಿಯನ್ನು ಪ್ರದರ್ಶಿಸಬೇಕು,” ಎಂದು ಪ್ರೇರಣೆಯ ಮಾತುಗಳನ್ನಾಡಿದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸುಲೋಚನಾ ದೇವಾಡಿಗ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳ ಸಾಲಿನಲ್ಲಿ ಮಾಲತಿ ಗೋವಿಂದ ಪೂಜಾರಿ, ವಿಶ್ವೇಶ್ವರ ಅಡಿಗ, ನಿವೃತ್ತ ಶಿಕ್ಷಕ ಗೋಪಾಲ್ ಶೇರುಗಾರ್, ಗಿರೀಶ್ ಶಾನುಭಾಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯರಾದ ವೀರೇಂದ್ರ ಶೆಟ್ಟಿ, ಗಿರೀಶ್ ದೇವಾಡಿಗ, ಲೋಲಾಕ್ಷಿ ದೇವಾಡಿಗ, ಹಾಗೂ ಲಕ್ಷ್ಮಿ ಅವರು ಶಾಲೆಯ ಮೇಲಿನ ತಮ್ಮ ಅಭಿಮಾನವನ್ನು ಮೆರೆದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು. ಎಸ್‌ಡಿಎಂಸಿ ಉಪಾಧ್ಯಕ್ಷೆ ಯಶೋದಾ ದೇವಾಡಿಗ, ಚಂದ್ರ ದೇವಾಡಿಗ, ಮತ್ತು ಮಂಜುನಾಥ್ ಆಚಾರ್ಯ ಸೇರಿದಂತೆ ಹಲವು ಪೋಷಕರು ಮತ್ತು ಸದಸ್ಯರು ಈ ಶೈಕ್ಷಣಿಕ ಮೈಲಿಗಲ್ಲಿಗೆ ಸಾಕ್ಷಿಯಾದರು.

ಕಾರ್ಯಕ್ರಮದ ಆರಂಭದಲ್ಲಿ ಗಣೇಶ್ ಬಿಲ್ಲವ ಅವರು ಸ್ವಾಗತ ಕೋರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸರೋಜಾ ಆಚಾರ್ಯ ಅವರು ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡರೆ, ಗುಲಾಬಿ ದೇವಾಡಿಗ ಅವರು ನೆರೆದವರಿಗೆ ವಂದನೆ ಸಲ್ಲಿಸಿದರು. ಒಟ್ಟಾರೆ, ಈ ಸ್ಮಾರ್ಟ್ ಕ್ಲಾಸ್ ಉಡುಗೊರೆಯು ಸಾಲಿಮಕ್ಕಿ ಶಾಲೆಯಲ್ಲಿ ಹೊಸ ಯುಗದ ಕಲಿಕೆಗೆ ನಾಂದಿ ಹಾಡಿದೆ.

Most Read

error: Content is protected !!