ಕಾಸರಗೋಡು ಜಿಲ್ಲೆಯಲ್ಲಿ ವರುಣನ ಆರ್ಭಟ: ಪ್ರಬಲಗೊಂಡ ಕಡಲ್ಕೊರೆತ, ಅಪಾರ ಹಾನಿ!

ಹೊಸ ದಿಗಂತ ವರದಿ,ಮಂಗಳೂರು:

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಾಸರಗೋಡು ಜಿಲ್ಲೆಯ ಕರಾವಳಿಯುದ್ದಕ್ಕೂ ಸಮುದ್ರವು ಅಬ್ಬರಿಸುತ್ತಿದೆ. ಜಿಲ್ಲೆಯ ಹಲವೆಡೆಗಳಲ್ಲಿ ಪ್ರಬಲವಾದ ಕಡಲ್ಕೊರೆತ ಸಂಭವಿಸುತ್ತಿದ್ದು ಅಪಾರ ನಾಶ ನಷ್ಟ ಉಂಟಾಗುತ್ತಿದೆ.

ಕಾಸರಗೋಡು ಕಸಬಾ ಕಡಪ್ಪುರ, ಚೇರಂಗೈ ಕಡಪ್ಪುರ, ಕೀಯೂರು ಕಡಪ್ಪುರ, ಕುಂಬಳೆಯ ಕೊಯಿಪ್ಪಾಡಿ, ಮಂಗಲ್ಪಾಡಿಯ ಪೆರಿಂಗಡಿ, ಐಲ ಶಿವಾಜಿನಗರ, ಹನುಮಾನ್‌ನಗರ, ಶಾರದಾನಗರ, ಮುಸೋಡಿ, ಮಣಿಮುಂಡ, ಮಂಜೇಶ್ವರದ ಕಣ್ವತೀರ್ಥ ಮುಂತಾದ ಕಡೆಗಳಲ್ಲಿ ಅತಿಯಾದ ಸಮುದ್ರ ಕೊರೆತದಿಂದಾಗಿ ಗಾಳಿಮರಗಳು, ತೆಂಗಿನ ಮರಗಳು ಕಡಲಿಗೆ ಆಹುತಿಯಾಗುತ್ತಿವೆ.

ಉಪ್ಪಳ ಸಮುದ್ರ ಕಿನಾರೆಯಲ್ಲಿ ಕೆಲವು ಮನೆಗಳು ಕಡಲ್ಕೊರೆತದಿಂದಾಗಿ ಕುಸಿದು ಬೀಳುವ ಹಂತಕ್ಕೆ ತಲುಪಿವೆ. ಈ ಹಿನ್ನೆಲೆಯಲ್ಲಿ ಅನೇಕ ಕುಟುಂಬಗಳು ರಾತ್ರಿ ಹಗಲು ನಿದ್ದೆಯಿಲ್ಲದ ಸಂಕಷ್ಟಮಯ ಬದುಕು ಅನುಭವಿಸುತ್ತಿದ್ದಾರೆ. ಪೆರಿಂಗಡಿಯಲ್ಲಿ ಕಡಪ್ಪುರಕ್ಕಿರುವ ಸಂಪರ್ಕ ರಸ್ತೆಯು ಸಮುದ್ರ ಪಾಲಾಗಿದೆ. ಜೊತೆಗೆ ಬಿರುಸಿನ ಗಾಳಿಗೆ ಬೃಹತ್ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ವಿದ್ಯುತ್ ಸಂಪರ್ಕವೂ ಅಸ್ತವ್ಯಸ್ತಗೊಂಡಿದೆ.

ಕಾಸರಗೋಡು ಜಿಲ್ಲೆಯಲ್ಲಿ ಇನ್ನೂ ಒಂದು ವಾರ ಕಾಲ ಬಿರುಸಿನ ಮಳೆ ಮುಂದುವರಿಯಲಿದೆ ಎಂದು ತಿರುವನಂತಪುರದ ಕೇಂದ್ರ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಗಂಟೆಗೆ 40 ರಿಂದ50 ಕಿಲೋ ಮೀಟರ್ ವೇಗದಲ್ಲಿ ಪ್ರಬಲ ಗಾಳಿ ಬೀಸುವ ಸಾಧ್ಯತೆಯಿದೆ. ಜು.24 ಹಾಗೂ 25 ರಂದು ಏಕಕಾಲಕ್ಕೆ 50-60 ಕಿಲೋ ಮೀಟರ್ ವೇಗದ ಗಾಳಿಯೊಂದಿಗೆ ಬಿರುಸಿನ ಮಳೆ ಸುರಿಯುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಸಿದ್ದು, ಸಮುದ್ರ ಕರಾವಳಿಯಲ್ಲಿ ಇನ್ನಷ್ಟು ಎತ್ತರಕ್ಕೆ ಅಲೆಗಳು ಆರ್ಭಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಜಿಲ್ಲೆಯ ತೃಕ್ಕನ್ನಾಡು ಕರಾವಳಿಯು ಕಡಲಬ್ಬರಕ್ಕೆ ಅಹುತಿಯಾಗುತ್ತಿದೆ. ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದ ಎದುರಿನ ಕಾಸರಗೋಡು – ಕಾಞಂಗಾಡು ರಾಜ್ಯ ಹೆದ್ದಾರಿಯ ಸನಿಹ ತನಕ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದು, ಯಾವುದೇ ಸಂದರ್ಭದಲ್ಲಿ ಹೆದ್ದಾರಿಯು ಕಡಲಾಕ್ರಮಣಕ್ಕೆ ಒಳಗಾಗಲಿದೆ. ಈ ಭಾಗದಲ್ಲಿ ನೂರಾರು ಮನೆಗಳಿದ್ದು, ಅವುಗಳಲ್ಲಿ ಅನೇಕ ಮನೆಗಳ ಗೋಡೆಗಳಿಗೆ ಕಡಲ್ಕೊರೆತದಿಂದಾಗಿ ಅಲೆಗಳು ಅಪ್ಪಳಿಸಿ ಭಾರೀ ಸಮಸ್ಯೆ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!