ಇಂದಿನ ಕಾಲದಲ್ಲಿ ಮನಿ ಪ್ಲಾಂಟ್ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಸ್ಯ. ಅಲಂಕಾರಕ್ಕಾಗಿ ಮಾತ್ರವಲ್ಲದೆ, ಇದು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಶುಭಕರವಾದ ಸಸ್ಯವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಸಂಪತ್ತು, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲು ಇದು ನೆರವಾಗುತ್ತದೆ ಎಂದು ನಂಬಲಾಗಿದೆ. ಆದರೆ ಇದರ ಪೂರ್ಣ ಲಾಭ ಪಡೆಯಲು, ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಅತ್ಯಂತ ಮುಖ್ಯ.

ಯಾವ ದಿಕ್ಕಿನಲ್ಲಿ ಇಡಬೇಕು?
ಆಗ್ನೇಯ ದಿಕ್ಕು: ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಇಡುವ ಅತ್ಯಂತ ಮಂಗಳಕರ ದಿಕ್ಕು ಆಗ್ನೇಯ. ಈ ದಿಕ್ಕಿನ ಅಧಿಪತಿ ಗಣೇಶ, ಅಡೆತಡೆಗಳನ್ನು ನಿವಾರಿಸುವ ಶಕ್ತಿ ಹೊಂದಿದ್ದಾರೆ. ಹಾಗಾಗಿ ಈ ದಿಕ್ಕಿನಲ್ಲಿ ಇಡುವುದರಿಂದ ಕೆಲಸಗಳು ಸುಗಮವಾಗಿ ನೆರವೇರುತ್ತವೆ.
ಶುಕ್ರನ ಪ್ರಭಾವ: ಆಗ್ನೇಯ ದಿಕ್ಕಿನ ಪ್ರತಿನಿಧಿ ಗ್ರಹ ಶುಕ್ರ. ಶುಕ್ರನು ಹಣ, ಐಶ್ವರ್ಯ, ಸಂತೋಷ ಮತ್ತು ಸಂಬಂಧಗಳ ಬೆಳವಣಿಗೆಗೆ ಕಾರಣವಾಗುತ್ತಾನೆ. ಈ ಕಾರಣಕ್ಕೆ ಮನಿ ಪ್ಲಾಂಟ್ ಆಗ್ನೇಯ ದಿಕ್ಕಿನಲ್ಲಿ ಇರಿಸಿದರೆ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ.
ಸಕಾರಾತ್ಮಕ ಶಕ್ತಿ: ಈ ದಿಕ್ಕು ಬೆಂಕಿಯ ಅಂಶಕ್ಕೆ ಸಂಬಂಧಿಸಿದ್ದು, ಶಕ್ತಿ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲಸಲು ಸಹಾಯ ಮಾಡುತ್ತದೆ.

ಯಾವ ದಿಕ್ಕುಗಳನ್ನು ತಪ್ಪಿಸಬೇಕು?
ಈಶಾನ್ಯ ದಿಕ್ಕು: ಮನಿ ಪ್ಲಾಂಟ್ ಅನ್ನು ಈ ದಿಕ್ಕಿನಲ್ಲಿ ಇಡಬಾರದು. ಇದು ಗುರುನ ದಿಕ್ಕು, ಆದರೆ ಶುಕ್ರ ಮತ್ತು ಗುರು ನಡುವೆ ವೈಮನಸ್ಸಿದೆ. ಇದರ ಪರಿಣಾಮವಾಗಿ ಆರ್ಥಿಕ ನಷ್ಟ, ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಪಶ್ಚಿಮ ಮತ್ತು ನೈಋತ್ಯ ದಿಕ್ಕು: ಈ ದಿಕ್ಕುಗಳಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಖ್ಯಾತಿ ಮತ್ತು ಸಂಬಂಧಗಳಿಗೆ ಹಾನಿಯಾಗಬಹುದು.
ಮನಿ ಪ್ಲಾಂಟ್ ಸರಿಯಾದ ದಿಕ್ಕಿನಲ್ಲಿ ಇಟ್ಟಾಗ ಮನೆಯಲ್ಲಿ ಐಶ್ವರ್ಯ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ಹರಿದುಬರುತ್ತದೆ. ವಿಶೇಷವಾಗಿ ಆಗ್ನೇಯ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಸ್ಥಿತಿ ಬಲವಾಗುತ್ತದೆ ಮತ್ತು ಸಂಬಂಧಗಳಲ್ಲಿ ಪ್ರೀತಿ ಹೆಚ್ಚುತ್ತದೆ. ಆದರೆ ತಪ್ಪು ದಿಕ್ಕಿನಲ್ಲಿ ಇಟ್ಟರೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವ ಮೂಲಕ ಮನಿ ಪ್ಲಾಂಟ್‌ನಿಂದ ಗರಿಷ್ಠ ಪ್ರಯೋಜನ ಪಡೆಯಬಹುದು. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. )
