ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಎವರ್‌ಗ್ರೀನ್ ಸ್ಟಾರ್ ಹಾಗೂ ಆಕ್ಷನ್ ಕಿಂಗ್ ಎಂದು ಹೆಸರಾಗಿದ್ದ ಹಿರಿಯ ನಟ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ಇಂದು ಮುಂಬೈನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಇನ್ನೂ ಎರಡು ವಾರಗಳಲ್ಲಿ 90ನೇ ವಸಂತಕ್ಕೆ ಕಾಲಿಡಬೇಕಿದ್ದ ಧರ್ಮೇಂದ್ರ ಅವರ ಅಗಲಿಕೆಯಿಂದ ಚಲನಚಿತ್ರ ಕ್ಷೇತ್ರದಲ್ಲಿ ತುಂಬಲಾರದ ನಷ್ಟವಾಗಿದೆ.
ಕೆಲ ತಿಂಗಳಿನಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅವರ ಆರೋಗ್ಯ ಚೇತರಿಸುತ್ತಿದೆ ಎಂಬ ಮಾಹಿತಿಯ ನಂತರ ಮನೆಗೆ ಡಿಶ್ಚಾರ್ಜ್ ಮಾಡಲಾಗಿತ್ತು. ಆಸ್ಪತ್ರೆ ದಿನಗಳಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಗೋವಿಂದ, ರಿತೇಶ್–ಜೆನಿಲಿಯಾ ದೇಶ್‌ಮುಖ್, ಅಮೀಷಾ ಪಟೇಲ್ ಸೇರಿದಂತೆ ಅನೇಕ ತಾರೆಯರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಧರ್ಮೇಂದ್ರ ಅವರು ತಮ್ಮ ಮೊದಲ ಪತ್ನಿಯಾದ ಪ್ರಕಾಶ್ ಕೌರ್ ಅವರೊಂದಿಗೆ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾರೆಂದು ಅವರ ಕಿರಿಯ ಪುತ್ರ ಬಾಬಿ ಡಿಯೋಲ್ ಇತ್ತೀಚೆಗೆ ಬಹಿರಂಗಪಡಿಸಿದ್ದರು.
ದಶಕಗಳ ಕಾಲ ಬಾಲಿವುಡ್ ಅನ್ನು ಮಂತ್ರಮುಗ್ಧಗೊಳಿಸಿದ್ದ ಧರ್ಮೇಂದ್ರ ಅವರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅಜರಾಮರವಾದ ಪಾತ್ರಗಳನ್ನು ನೀಡಿದ್ದರು. ‘ಶೋಲೆ’, ‘ಚುಪ್ಕೆ ಚುಪ್ಕೆ’, ‘ಸೀತಾ ಔರ್ ಗೀತಾ’ ಮೊದಲಾದ ದೊಡ್ಡ ಹಿಟ್‌ಗಳ ಮೂಲಕ ಭಾರತೀಯ ಸಿನಿರಂಗದಲ್ಲಿ ಅಚ್ಚಳಿಯದ ಗುರುತು ಬಿಟ್ಟಿದ್ದರು.

