Monday, November 10, 2025

ಪರಿಸರವಾದಿಗಳ ಹೋರಾಟಕ್ಕೆ ಗೆಲುವು: ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಕೇಂದ್ರದ ತಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕನ್ನಡದ ಶರಾವತಿ ನದಿಗೆ ನಿರ್ಮಿಸಲು ಉದ್ದೇಶಿಸಿದ್ದ 2,000 ಮೆಗಾವ್ಯಾಟ್ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರ ತಡೆಹಿಡಿದಿದೆ. ಹೀಗಾಗಿ ಪರಿಸರವಾದಿಗಳ ಹೋರಾಟಕ್ಕೆ ಭರ್ಜರಿ ಗೆಲುವು ಸಿಕ್ಕಂತೆ ಆಗಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ 54 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸುವ ಪ್ರಸ್ತಾವನೆಗೆ ಅರಣ್ಯ ಸಲಹಾ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಸಮಿತಿಯ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಪಂಪ್ಡ್ ಸ್ಟೋರೇಜ್ ಯೋಜನೆಯು ವಿಶ್ವದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನ ಎಂದೇ ಪರಿಗಣಿಸಲಾಗಿದ್ದು, ಎರಡು ಜಲಾಶಯಗಳ ನಡುವೆ ಇದನ್ನು ಕಾರ‍್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್‌ ಲಭ್ಯವಿದ್ದಾಗ, ಕೆಳಗಿನ ಜಲಾಶಯದ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್‌ ಮಾಡಿ ಸಂಗ್ರಹಿಸಲಾಗುತ್ತದೆ ಮತ್ತು ವಿದ್ಯುತ್‌ ಬೇಡಿಕೆ ಹೆಚ್ಚಾದಾಗ ಆ ಸಂಗ್ರಹಿಸಿದ ನೀರನ್ನು ಬಳಸಿ ವಿದ್ಯುತ್‌ ಉತ್ಪಾದಿಸಿ ಗ್ರಿಡ್‌ಗೆ ಪೂರೈಸಲಾಗುತ್ತದೆ.

ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತವು ಈ ತಂತ್ರಜ್ಞಾನವನ್ನು ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಯಲ್ಲಿ (ತಳಕಳಲೆ ಮತ್ತು ಗೇರುಸೊಪ್ಪ ನಡುವೆ) ಅಳವಡಿಸಲು ಹೊರಟಿದ್ದು, ಇದರ ಮೂಲಕ 2000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ. 10,500 ಕೋಟಿ ರೂ. ವೆಚ್ಚದ ಈ ಯೋಜನೆಗೆ ಹೈದರಾಬಾದ್‌ ಮೂಲದ ಮೇಘಾ ಎಂಜಿನಿಯರಿಂಗ್‌ ಮತ್ತು ಇನ್ಫಾಸ್ಟ್ರಕ್ಚರ್ಸ್‌ ಸಂಸ್ಥೆಗೆ ಕಳೆದ ಫೆಬ್ರವರಿಯಲ್ಲಿ 8005 ಕೋಟಿ ರೂ.ಗಳ ಟೆಂಡರ್‌ ನೀಡಲಾಗಿತ್ತು. ಇದೀಗ ಈ ಯೋಜನೆಗೆ ಕೇಂದ್ರ ಸರ್ಕಾರ ಪರಿಸರಕ್ಕೆ ಹಾನಿಯ ಹಿನ್ನಲೆಯಲ್ಲಿ ತಡೆ ನೀಡಿದೆ.

error: Content is protected !!