ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡು ಹಾಗೂ ಪುದುಚೇರಿಗೂ ಸಿಕ್ಕಿದ ಜಯ ಎಂದು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ, ಮೇಕೆದಾಟು ಯೋಜನೆಯು ಕಷ್ಟದ ಸಮಯದಲ್ಲಿ ತಮಿಳುನಾಡಿನ ಪಾಲಿನ ನೀರನ್ನು ಬಿಡುಗಡೆ ಮಾಡಲು ನೆರವಾಗಲಿದ್ದು, ಇದು ಅವರಿಗೂ ಹೆಚ್ಚು ಉಪಯೋಗವಾಗಲಿದೆ ಎಂದು ವಿವರಿಸಿದರು.
ಹೋರಾಟಕ್ಕೆ ಸಿಕ್ಕ ಗೆಲುವು: ಕಾವೇರಿ ನೀರು ಬಳಕೆಗಾಗಿ ‘ನಮ್ಮ ನೀರು, ನಮ್ಮ ಹಕ್ಕು’ ಎಂದು ರಾಜ್ಯದಲ್ಲಿ ಹೋರಾಟ ಮಾಡಿ, ಆ ಬಳಿಕ ಅಧಿಕಾರಕ್ಕೆ ಬಂದ ನಂತರ ಕಾನೂನು ಸಮರ ಮುಂದುವರಿಸಿದೆವು. ಈ ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಕರ್ನಾಟಕ ಕಾನೂನು ಒತ್ತಡ ಹೇರಿತು. ಅದರ ಫಲವಾಗಿ ಸುಪ್ರೀಂ ಕೋರ್ಟಿನ ವಿಶೇಷ ಪೀಠ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ತಮಿಳುನಾಡು ಅರ್ಜಿ ವಜಾ: ನ್ಯಾಯಾಲಯದಲ್ಲಿ ಈ ವಿಚಾರ ತೀರ್ಮಾನ ಮಾಡುವ ವಿಷಯವಲ್ಲ. ತಮಿಳುನಾಡಿಗೆ ನಿಗದಿಪಡಿಸಿದ 177 ಟಿಎಂಸಿ ನೀರನ್ನು ಕರ್ನಾಟಕ ಬಿಡಲೇಬೇಕು ಎಂದು ನಿರ್ದೇಶಿಸಿದ ನ್ಯಾಯಾಲಯವು, ಯೋಜನೆ ವಿರುದ್ಧ ಸಲ್ಲಿಸಲಾದ ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂ ಕೋರ್ಟಿನ ಮಾರ್ಗದರ್ಶನಕ್ಕೆ ಬದ್ಧವಾಗಿರುವುದಾಗಿ ಘೋಷಿಸಿದ ಡಿಸಿಎಂ, ಕರ್ನಾಟಕದ ನೆಲದಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು.
ಸಿಡಬ್ಲ್ಯೂಸಿ, ಕಾವೇರಿ ಪ್ರಾಧಿಕಾರಕ್ಕೆ ಅಂತಿಮ ನಿರ್ಧಾರ: ಈ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಅಂತಿಮ ತೀರ್ಮಾನಗಳನ್ನು ಕೇಂದ್ರ ಜಲ ಆಯೋಗ (CWC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಹಾಗಾಗಿ, ಈ ವಿಷಯದಲ್ಲಿ ಮತ್ತೆ ನ್ಯಾಯಾಲಯದ ಮುಂದೆ ಹೋಗುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು. ಇನ್ನುಮುಂದೆ ಕಾನೂನು ಚೌಕಟ್ಟಿನಲ್ಲಿ ಯೋಜನೆಗೆ ಅಗತ್ಯ ಇಲಾಖೆಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

