ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಲೀಕ್ ಆಗಿ ವೈರಲ್ ಆದ ವೀಡಿಯೋ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ನಟ ಧನ್ವೀರ್ ಇಂದು ಪೊಲೀಸರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಅಧಿಕವಾಗಿದೆ. ಜೈಲಿನ ಒಳಗಿನ ಅಕ್ರಮ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಕಳೆದ 13ರಂದು ನೀಡಿದ್ದ ನೋಟಿಸ್‌ಗೆ ಅವರು ಗೈರಾಗಿದ್ದರಿಂದ, ವಕೀಲರ ಮೂಲಕ ಕಾಲಾವಕಾಶವನ್ನು ಕೇಳಲಾಗಿತ್ತು. ಇದಾದ ಬಳಿಕ 15ರಂದು ಮತ್ತೊಂದು ನೋಟಿಸ್ ನೀಡಿದ ಪೊಲೀಸರು, ಇಂದು ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ವೀಡಿಯೋ ಲೀಕ್ ಪ್ರಕರಣವನ್ನು ತನಿಖೆ ಮಾಡುತ್ತಿರುವ ಸಿಸಿಬಿ ಈಗಾಗಲೇ ಧನ್ವೀರ್ ಅವರ ಮೊಬೈಲ್ ವಶಕ್ಕೆ ಪಡೆದು ತೀವ್ರ ಪರಿಶೀಲನೆ ನಡೆಸುತ್ತಿದೆ. ಜೈಲಿನೊಳಗೆ ಇತರ ಕೈದಿಗಳು ಮತ್ತು ಸಿಬ್ಬಂದಿ ನಡುವಿನ ಚಟುವಟಿಕೆಗಳನ್ನು ತೋರಿಸುವ ಹಲವು ವೀಡಿಯೋಗಳು ಹೊರಬಿದ್ದಿದ್ದು, ಇದು ಕೇವಲ ಮೂರು ಅಲ್ಲ, 20ಕ್ಕೂ ಹೆಚ್ಚು ವೀಡಿಯೋಗಳಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಧನ್ವೀರ್ ಹೆಸರು ಈ ಪ್ರಕರಣದಲ್ಲಿ ಹೊರಬಂದ ಬಳಿಕ, ದರ್ಶನ್‌ಗೆ ಜೈಲಿನಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂಬ ಅಸಮಾಧಾನದಿಂದ ಧನ್ವೀರ್ ವೀಡಿಯೋ ವೈರಲ್ ಮಾಡಿದ್ದಾರೇ? ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿವೆ. ದರ್ಶನ್ ಮೇಲಿನ ಸ್ನೇಹಕ್ಕಾಗಿ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೇ ಎಂಬ ಅನುಮಾನಗಳು ಕೂಡ ಹೆಚ್ಚುತ್ತಿವೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಧನ್ವೀರ್ ವಿಚಾರಣೆಗೆ ಹಾಜರಾಗುವ ಬಗ್ಗೆ ಅಧಿಕೃತ ದೃಢೀಕರಣಕ್ಕಾಗಿ ಕಾದು ನೋಡಲಾಗುತ್ತಿದೆ.

