Monday, November 10, 2025

viral | ಪ್ರತಿದಿನ 110 ಹಸಿ ಮೊಟ್ಟೆ ತಿನ್ನೋ ‘ಎಗ್ ಮ್ಯಾನ್’ ವಿಡಿಯೋ ವೈರಲ್! ವೈದ್ಯರು ಕೊಟ್ರು ಖಡಕ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿ ದಿನ ಒಂದಲ್ಲಒಂದು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುತ್ತವೆ. ಈ ಸಲ ಕೂಡ ಅಂತಹುದೇ ವಿಚಿತ್ರ ಘಟನೆ ವೈರಲ್ ಆಗ್ತಿದೆ. ಅದುವೇ ಉಜ್ಬೇಕಿಸ್ತಾನ್‌ನ ವ್ಯಕ್ತಿಯೊಬ್ಬರು ಪ್ರತಿದಿನ 110 ಹಸಿ ಮೊಟ್ಟೆಗಳನ್ನು ತಿನ್ನುತ್ತಿದ್ದಾರೆ ಅನ್ನೋದು. ಈ ಅಚ್ಚರಿ ಪಡುವಂತ ವಿಡಿಯೋ ಇದೀಗ ಎಕ್ಸ್ ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಈ ವ್ಯಕ್ತಿ ಹಲವು ವರ್ಷಗಳಿಂದ ಈ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದು, “ಇದು ನನ್ನ ದೇಹಕ್ಕೆ ಶಕ್ತಿ ನೀಡುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ನಾನು ಯಾವತ್ತೂ ಅನಾರೋಗ್ಯಕ್ಕೊಳಗಾಗುವುದಿಲ್ಲ” ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಈ ವ್ಯಕ್ತಿ ಬೇಯಿಸದ 110 ಮೊಟ್ಟೆಗಳನ್ನು ಒಡೆದು ಕುಡಿಯುತ್ತಿರುವುದು ಕಾಣಬಹುದು. ವಿಡಿಯೋ ವೈರಲ್ ಆದ ನಂತರ, ನೆಟ್ಟಿಗರು ಅವರನ್ನು ಪ್ರೀತಿಯಿಂದ ‘ಎಗ್ ಮ್ಯಾನ್’ ಎಂದು ಕರೆದಿದ್ದಾರೆ. “ಇದು ನನ್ನ ತ್ರಾಣವನ್ನು ಹೆಚ್ಚಿಸಿ, ನಾನು 20 ವರ್ಷದ ಯುವಕರಂತೆ ಫಿಟ್ ಆಗಿರಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿರುವುದರಿಂದ, ಈ ವಿಡಿಯೋ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.

ಈ ಅಚ್ಚರಿಯ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು “ಅಸಾಧ್ಯ” ಎಂದರೆ, ಇತರರು “ಆರೋಗ್ಯದ ವಿರುದ್ಧದ ಸಾಹಸ” ಎಂದು ಟೀಕಿಸಿದ್ದಾರೆ. ಕೆಲವರು ‘ಇಷ್ಟು ಮೊಟ್ಟೆ ತಿನ್ನುವುದೇ ಹೇಗೆ ಸಾಧ್ಯ?’ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ.

ವೈದ್ಯರಿಂದ ಎಚ್ಚರಿಕೆ: ಹಸಿ ಮೊಟ್ಟೆ ಮಾರಕವಾಗಬಹುದು
ವೈದ್ಯರು ಈ ವ್ಯಕ್ತಿಯ ಕ್ರಮದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಮೊಟ್ಟೆಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್‌ಗಳು ಇದ್ದರೂ, ಹಸಿಯಾಗಿ ತಿನ್ನುವುದು ಸುರಕ್ಷಿತವಲ್ಲ ಎಂದು ತಜ್ಞರು ಹೇಳುತ್ತಾರೆ. ಹಸಿ ಮೊಟ್ಟೆಗಳಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚಿದ್ದು, ಇದು ಆಹಾರ ವಿಷಬಾಧೆ, ಜ್ವರ, ಅಜೀರ್ಣ ಮತ್ತು ಇತರೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಈ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಮೂಡಿಸಿದರೂ, ವೈದ್ಯಕೀಯವಾಗಿ ಇದು ಸುರಕ್ಷಿತವಾದ ಕ್ರಮವಲ್ಲ. ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಹಾಗೂ ವೈದ್ಯಕೀಯ ಸಲಹೆ ಪಡೆಯುವುದು ದೀರ್ಘಕಾಲದ ಆರೋಗ್ಯಕ್ಕಾಗಿ ಅತ್ಯಂತ ಅಗತ್ಯ.

error: Content is protected !!