Monday, January 12, 2026
Monday, January 12, 2026
spot_img

ವಿಜಯ್ ಹಜಾರೆ ಟ್ರೋಫಿ: ಮುಂಬೈ ಮಣಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಕರ್ನಾಟಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಹಾಗೂ ಕರ್ನಾಟಕ ನಡುವಿನ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿಜೆಡಿ ನಿಯಮದಡಿಯಲ್ಲಿ 55 ರನ್​ಗಳಿಂದ ಗೆದ್ದು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 8 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 1 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತ್ತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ಮೊದಲ ವಿಕೆಟ್​ಗೆ ಆರಂಭಿಕರಾದ ಅಂಗ್‌ಕ್ರಿಶ್ ರಘುವಂಶಿ ಮತ್ತು ಇಶಾನ್ 36 ರನ್​ಗಳ ಜೊತೆಯಾಟ ನೀಡಿದರು. ಇಶಾನ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆ ನಂತರ ಬಂದ ಮುಶೀರ್ ಖಾನ್ ಕೂಡ 9 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಾಯಕ ಸಿದ್ದೇಶ್ 38 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಕ್ವಾರ್ಟರ್ ಫೈನಲ್​ಗೂ ಮುನ್ನ ಅದ್ಭುತ ಫಾರ್ಮ್​ನಲ್ಲಿದ್ದ ಸರ್ಫರಾಜ್ ಖಾನ್ ಇಂಜುರಿಗೊಳಗಾಗಿದ್ದು ತಂಡಕ್ಕೆ ದೊಡ್ಡ ಹೊಡೆತು ನೀಡಿತು. ಇದರ ಜೊತೆಗೆ ನಾಯಕ ಶ್ರೇಯಸ್ ಇಲ್ಲದಿರುವುದು ಕೂಡ ಮುಂಬೈ ತಂಡವನ್ನು ಹಿನ್ನಡೆಗೆ ತಳ್ಳಿತು.

ಕೊನೆಯಲ್ಲಿ ತಂಡದ ಪರ ಏಕಾಂಗಿ ಹೋರಾಟ ನೀಡಿದ ಶಮ್ಸ್ ಮುಲಾನಿ ಅತ್ಯಧಿಕ 86 ರನ್​ಗಳ ಇನ್ನಿಂಗ್ಸ್ ಆಡಿದರೆ, ಸಾಯಿರಾಜ್ ಪಾಟೀಲ್ ಕೂಡ 33 ರನ್​ಗಳ ಕಾಣಿಕೆ ನೀಡಿದರು.

ಗೆಲ್ಲಲು 255 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಉತ್ತಮ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ಮಯಾಂಕ್‌ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ 9.2 ಓವರ್‌ಗಳಲ್ಲಿ 44 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮಯಾಂಕ್ ಅಗರ್‌ವಾಲ್ 12 ರನ್ ಗಳಿಸಿ ಮೋಹಿತ್ ಅವಸ್ತಿಗೆ ವಿಕೆಟ್ ಒಪ್ಪಿಸಿದರು.

ಮಯಾಂಕ್ ಅಗರ್‌ವಾಲ್ ವಿಕೆಟ್ ಪತನದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ದೇವದತ್ ಪಡಿಕ್ಕಲ್ ಹಾಗೂ ಅನುಭವಿ ಬ್ಯಾಟರ್ ಕರುಣ್ ನಾಯರ್ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಈ ಜೋಡಿ ಎರಡನೇ ವಿಕೆಟ್‌ಗೆ ಮುರಿಯದ 143 ರನ್‌ಗಳ ಜತೆಯಾಟವಾಡಿದೆ. ರೆಡ್‌ ಹಾಟ್ ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಕೇವಲ 95 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 81 ರನ್ ಗಳಿಸಿದ್ದು, ಮತ್ತೊಂದು ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ಪಡಿಕ್ಕಲ್‌ಗೆ ಉತ್ತಮ ಸಾಥ್ ನೀಡುತ್ತಿರುವ ಅನುಭವಿ ಬ್ಯಾಟರ್ ಕರುಣ್ ನಾಯರ್ 80 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 74 ರನ್ ಸಿಡಿಸಿ ಅಜೇಯರಾಗುಳಿದಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!