ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸೆಯ ಸ್ವರೂಪ ಪಡೆದುಕೊಂಡಿದ್ದು, ಹಲವಾರು ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಯ ಸಾವಿಗೆ ಕಾರಣವಾಗಿವೆ. ಈ ಹಿನ್ನೆಲೆ ಭಾರತವು ಇರಾನ್‌ಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಹಾಗೂ ಅನಗತ್ಯ ಪ್ರಯಾಣ ತಪ್ಪಿಸುವಂತೆ ಸಲಹೆ ನೀಡಿದೆ.
ಇರಾನ್‌ನ ಇಸ್ಲಾಮಿಕ್ ಆಡಳಿತದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಇತ್ತ ಕಳೆದ ವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಾಳಿ ನಡೆಸದಂತೆ ಟೆಹ್ರಾನ್ ಗೆ ಎಚ್ಚರಿಕೆ ನೀಡಿದ್ದರು. ಆದರೂ ದೇಶದಲ್ಲಿ ಪ್ರತಿಭಟನಾಕಾರರ ಹತ್ಯಾಕಾಂಡ ಮುಂದುವರಿದಿದೆ.
ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ಎಚ್ಚರಿಕೆ
ಇದೀಗ ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆ ಮುಂದಿನ ಸೂಚನೆ ನೀಡುವವರೆಗೂ ಇರಾನ್‌ಗೆ ಅಗತ್ಯ ಪ್ರಯಾಣವನ್ನು ಸಂಪೂರ್ಣವಾಗಿ ತಪ್ಪಿಸುವಂತೆ ಭಾರತ ಸರ್ಕಾರ ತನ್ನ ನಾಗರಿಕರಿಗೆ ಸೂಚಿಸಿದೆ.
‘ಈಗ ಇರಾನ್‌ನಲ್ಲಿ ಇರುವ ಭಾರತೀಯ ನಾಗರಿಕರು ಮತ್ತು ಪಿಐಒಗಳು (ಭಾರತೀಯ ಮೂಲದ ವ್ಯಕ್ತಿಗಳು) ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಪ್ರತಿಭಟನೆ ಅಥವಾ ಮೆರವಣಿಗೆ ನಡೆಯುತ್ತಿರುವ ಪ್ರದೇಶಗಳಲ್ಲಿ ಸಂಚಾರ ತಪ್ಪಿಸಬೇಕು ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು’ ಎಂದು ಭಾರತ ಸಲಹೆ ನೀಡಿದೆ.
ಇರಾನ್‌ನಲ್ಲಿ ನಿವಾಸಿ ವೀಸಾದ ಮೇಲೆ ವಾಸಿಸುತ್ತಿರುವ ಭಾರತೀಯರು ಈಗಾಗಲೇ ನೋಂದಣಿ ಮಾಡಿಸದಿದ್ದರೆ, ಭಾರತೀಯ ರಾಯಭಾರ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಕೂಡ ಭಾರತ ತಿಳಿಸಿದೆ.

