Tuesday, December 16, 2025

Viral | ಚಂಡಮಾರುತಕ್ಕೆ ತತ್ತರಿಸಿದ ಬ್ರೆಜಿಲ್: ನೆಲಕ್ಕುರುಳಿದ ಲಿಬರ್ಟಿ ಪ್ರತಿಮೆ ಪ್ರತಿಕೃತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಬ್ರೆಜಿಲ್‌ನ ಗುವಾಯ್ಬಾ ನಗರದಲ್ಲಿ ಅಪ್ಪಳಿಸಿದ ಭಾರೀ ಚಂಡಮಾರುತ ಮತ್ತು ಭೀಕರ ಗಾಳಿಯ ಹೊಡೆತಕ್ಕೆ ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯೊಂದು ನೆಲಕ್ಕುರುಳಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಮೂಲ ಪ್ರತಿಮೆಯ ಹೋಲಿಕೆಯುಳ್ಳ ಈ ಪ್ರತಿಕೃತಿಯನ್ನು 2020 ರಲ್ಲಿ ಸ್ಥಾಪಿಸಲಾಗಿತ್ತು. ನಗರವನ್ನು ಅಪ್ಪಳಿಸಿದ ಬಿರುಗಾಳಿಯ ರಭಸಕ್ಕೆ ಪ್ರತಿಮೆಯು ಮೊದಲಿಗೆ ಓರೆಯಾಗಿ, ನಂತರ ಪಕ್ಕದಲ್ಲಿದ್ದ ಖಾಲಿ ಪಾರ್ಕಿಂಗ್ ಪ್ರದೇಶದಲ್ಲಿ ಬಿದ್ದಿದೆ. ವರದಿಯ ಪ್ರಕಾರ, ಗಾಳಿಯ ವೇಗವು ಗಂಟೆಗೆ 80 ರಿಂದ 90 ಕಿ.ಮೀ. ಇತ್ತು ಎನ್ನಲಾಗಿದೆ.

ಒಂದು ಸಮಾಧಾನಕರ ಸಂಗತಿ ಎಂದರೆ, ಚಂಡಮಾರುತವು ಅಪ್ಪಳಿಸುವ ಮೊದಲು ಎಚ್ಚೆತ್ತ ಹತ್ತಿರದ ಅಂಗಡಿಗಳ ಸಿಬ್ಬಂದಿ ಕೂಡಲೇ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೆಲಕ್ಕುರುಳಿದ ಪ್ರತಿಮೆಯ 11 ಮೀಟರ್ ಎತ್ತರದ ಬಲವಾದ ಸ್ತಂಭವು ಹಾಗೆಯೇ ಉಳಿದುಕೊಂಡಿದೆ. ಪ್ರಬಲವಾದ ಗಾಳಿಯ ಪರಿಣಾಮವಾಗಿ ಪ್ರತಿಮೆಯು ಮಾತ್ರ ಪತನಗೊಂಡಿದೆ.

error: Content is protected !!